ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಾದಕ ವಸ್ತು ತಯಾರಿಸುವ ಘಟಕ ಪತ್ತೆಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಮಾದಕ ವಸ್ತು ತಡೆಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕಿದೆ.
ಮೈಸೂರಿನ ಬನ್ನಿಮಂಟಪದ ವರ್ತುಲ ರಸ್ತೆಯಲ್ಲಿ ಕಾರ್ ಗ್ಯಾರೇಜ್ ನಡೆಸುತ್ತಿದ್ದ ಈ ಅಕ್ರಮ ಇತ್ತೀಚಿಗೆ ಬೆಳಕಿಗೆ ಬಂದಿದ್ದು, ಮಹಾರಾಷ್ಟ್ರ ಪೊಲೀಸರು ಇನ್ನೂ ಪತ್ತೆ ಮಾಡಿದ್ದು, ಇಷ್ಟು ದಿನ ಸ್ಥಳೀಯ ಪೊಲೀಸರು ಏನು ಮಾಡುತ್ತಿದ್ದರು? ಇದು ಕರ್ತವ್ಯ ಲೋಪ ಅಲ್ವೇ? ಎಂಬ ಪ್ರಶ್ನೆಗಳು ಸಾರ್ವಜನಿಕರ ವಲಯದಲ್ಲಿ ಪ್ರತಿಧ್ವನಿಸುತ್ತಿವೆ.
ದಾಳಿ ಸಮಯದಲ್ಲಿ ಘಟಕದಲ್ಲಿ 11 ಕೆ.ಜಿ. ತೂಕದ ಎಂಡಿಎಂಎ ಮಾದಕ ವಸ್ತು ಪೌಡರ್, 50 ಕೆ.ಜಿ ಎಂಡಿಎಂಎ ದ್ರವ ರೂಪದಲ್ಲಿ ಸಿಕ್ಕಿದೆ. ಇದರ ಮೌಲ್ಯ ನೂರಾರು ಕೋಟಿ ರೂ. ಆಗಿದೆ. ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ಮಾದಕ ವಸ್ತು ತಯಾರಿಕಾ ಘಟಕ ಪತ್ತೆಯಾಗಿರುವುದು ಇದೇ ಮೊದಲು. ಈ ಘಟನೆ ಮೈಸೂರಿನ ಕೀರ್ತಿಗೆ ಕಳಂಕ ತಂದಿದೆ. ಜತೆಗೆ, ಮಾದಕ ವಸ್ತುಗಳ ಮಾರಾಟ ಜಾಲ ಹೊರ ಜಿಲ್ಲೆ, ರಾಜ್ಯಗಳಿಗೂ ಹಬ್ಬಿರುವುದು ಕಳವಳಕಾರಿಯಾಗಿದೆ.
ಇದೀಗ ಎಚ್ಚೆತ್ತುಕೊಂಡಿರುವ ನಗರ ಪೊಲೀಸರು, ವಿವಿಧೆಡೆ ದಿಢೀರ್ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇದೇ ಕೆಲಸವನ್ನು ಮೊದಲೇ ಮಾಡಿದ್ದರೆ ಈ ಅಕ್ರಮವನ್ನು ತಡೆಗಟ್ಟಬಹುದಿತ್ತಲ್ಲವೆ? ಎಂಬ ಪ್ರಶ್ನೆ ಮೂಡಿದೆ. ಈಗಲಾದರೂ, ನಿಯಮಿತವಾಗಿ ನಗರ ವಿವಿಧೆಡೆ ತಪಾಸಣಾ ಕಾರ್ಯ ನಡೆಸಿ ಮಾದಕ ವಸ್ತುಗಳ, ಗಾಂಜಾ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳನ್ನು ತಹಬದಿಗೆ ತರಬೇಕು. ಇದರೊಂದಿಗೆ ಮೈಸೂರು ಸುರಕ್ಷಿತ ನಗರಿ ಎಂಬ ಭಾವನೆ ಮೂಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಈ ವಿಷಯ ಕುರಿತು ಸಂಗ್ರಹಿಸಿರುವ ಜನಾಭಿಪ್ರಾಯ ಇಲ್ಲಿದೆ
ನಗರದಲ್ಲಿ ಮಾದಕವಸ್ತು ತಯಾರಿಕೆ ಮಾಡುತ್ತಿರುವುದು ಘಟಕ ಪತ್ತೆಯಾದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಡ್ರಗ್ಸ್ ಪೆಡ್ಲರ್ ಬಂಧಿಸಲಾಗಿದ್ದು, ಮಾದಕ ವಸ್ತು ಸೇವನೆ ಮಾಡಿದ್ದ ವ್ಯಸನಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಈ ಅಕ್ರಮ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ
ಸೀಮಾ ಲಾಟ್ಕರ್
ನಗರ ಪೊಲೀಸ್ ಆಯುಕ್ತೆ
ಡ್ರಗ್ಸ್ ತಯಾರಿಕೆ ನಗರಕ್ಕೆ ಕಳಂಕ ತಂದಿದೆ. 390 ಕೋಟಿ ರೂ. ಮೌಲ್ಯದ ಎಂಡಿಎಂ ಡ್ರಗ್ಸ್ ಪತ್ತೆಯಾಗಿರುವುದು ಆತಂಕಕಾರಿ ವಿಷಯ. ಸ್ಥಳೀಯ ಪೊಲೀಸರು ಯಾವುದೇ ರೀತಿಯಲ್ಲೂ ಕ್ರಮ ಕೈಗೊಂಡಿಲ್ಲ. ಅಚ್ಚರಿಯ ವಿಷಯ ಎಂದರೆ ಮಹಾರಾಷ್ಟ್ರ ಪೊಲೀಸರು ಮೈಸೂರಿಗೆ ಬಂದು ದಾಳಿ ನಡೆಸಿ ಈ ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಡ್ರಗ್ಸ್ ದಂಧೆ ಪ್ರಕರಣದಲ್ಲಿ ಅಂತಾರಾಜ್ಯ ತನಿಖೆ ನಡೆಸಬೇಕು. ರಾಷ್ಟ್ರೀಯ ಮಾದಕ ದ್ರವ್ಯ ಮಂಡಳಿ (ಎನ್‌ಸಿಬಿ) ಘಟಕವನ್ನು ಮೈಸೂರಿನಲ್ಲಿ ಸ್ಥಾಪಿಸಬೇಕಾಗಿದೆ.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ
ನಗರದಲ್ಲಿ ಮಾದಕ ವಸ್ತು ತಯಾರಿಕಾ ಘಟಕ ಪತ್ತೆಯಾಗಿರುವುದು ಹಾಗೂ ರಾಜಾರೋಷವಾಗಿ ನಡೆಯುತ್ತಿದ್ದುದ್ದನ್ನು ಗಮನಿಸಿದರೆ ಇಲ್ಲಿನ ಪೊಲೀಸ್ ಹಾಗೂ ಗುಪ್ತಚರ ವ್ಯವಸ್ಥೆಯ ವಿಫಲವಾಗಿದೆ. ನಗರದಲ್ಲಿ ಜನಸಂಖ್ಯೆಗೆ ತಕ್ಕಂತೆ ಪೊಲೀಸ್ ಠಾಣೆಗಳನ್ನು ಹೆಚ್ಚಿಸಬೇಕು, ಠಾಣೆಗಳ ವ್ಯಾಪ್ತಿಯನ್ನು ಪುನರ್ ರಚಿಸಬೇಕು. ಜನರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು ಎಂದು ಹಿಂದಿನಿಂದಲೂ ಒತ್ತಾಯಿಸಲಾಗಿದೆ. ಕಾನೂನು-ಸುವ್ಯವಸ್ಥೆ ಕಾಪಾಡುವುದು, ಸಂಚಾರ ವ್ಯವಸ್ಥೆ ಹಾಗೂ ಪೊಲೀಸರ ನಿಯೋಜನೆಯಲ್ಲಿ ನರಸಿಂಹರಾಜ ಕ್ಷೇತ್ರವನ್ನು ಕಡೆಗಣಿಸಲಾಗುತ್ತಿದೆ. ಈ ಅಕ್ರಮಕ್ಕೆ ಕಡಿವಾಣ ಹಾಕಬೇಕಾಗಿದೆ. ಈ ವಿಷಯವನ್ನು ಸರ್ಕಾರ ಗಮನಕ್ಕೂ ತಂದಿದ್ದೇನೆ
ತನ್ವೀರ್ ಸೇಠ್, ಶಾಸಕ
ಮಾದಕ ವಸ್ತುಗಳ ತಯಾರಿಕೆ ದೂರದ ಊರಿನಲ್ಲಿ ನಡೆಯುತ್ತದೆಂದು ಕೇಳಿದ್ದೆವು. ಇದೀಗ ಅದು ನಮ್ಮೂರಿಗೆ ಕಾಲಿಟ್ಟಿದೆ, ಇದು ಆತಂಕಕಾರಿ ವಿಷಯ. ಸುಲಭವಾಗಿ ವ್ಯಸನಿಗಳಿಗೆ ಇದು ದೊರೆಯುವಂತಾಗಿದೆ. ಇದರಿಂದ ಯುವ ಜನರು ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಜತೆಗೆ, ಡ್ರಗ್ಸ್ ತಯಾರಿಕೆ ಘಟಕ ಹಿಂದೆ ದೊಡ್ಡ ಶಕ್ತಿಗಳಿರುವ ಸಾಧ್ಯತೆವಿದೆ. ಆದ್ದರಿಂದ ಸಮಗ್ರವಾಗಿ ತನಿಖೆ ನಡೆಸಿ, ಈ ಅಕ್ರಮವನ್ನು ಬೇರುಸಹಿತ ಕಿತ್ತುಹಾಕಬೇಕು
ಕೆ.ವಿ.ದೇವೇಂದ್ರ,
ಸಂಘಟನಾ ಸಂಚಾಲಕರು, ದಸಂಸ
ಈ ಪ್ರಕರಣದಲ್ಲಿ ರಾಜ್ಯದ ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. ಆದ್ದರಿಂದ ಕೇಂದ್ರ ಗ್ರಹ ಇಲಾಖೆ ಮಧ್ಯ ಪ್ರವೇಶಿಸಿ ಸಮಗ್ರ ತನಿಖೆ ನಡೆಸಬೇಕು. ಜತೆಗೆ, ಈ ಡ್ರಗ್ಸ್ ತಯಾರಿಕಾ ಘಟಕದ ಹಿಂದೆ ಯಾರೆಲ್ಲ ಶಾಮೀಲಾಗಿದ್ದಾರೆ. ಅವರೆಲ್ಲರನ್ನೂ ಕಾನೂನಿನ ಅಡಿಯಲ್ಲಿ ಬಂಧಿಸಿ ಶಿಕ್ಷಿಸಬೇಕು. ಇಲ್ಲಿ ತಯಾರಿಸುತ್ತಿದ್ದ ಡ್ರಗ್ಸ್ ಎಲ್ಲೆಲ್ಲಿಗೆ ಸರಬರಾಜು ಆಗುತ್ತಿತ್ತು ಮತ್ತು ಯಾರು ಸರಬರಾಜು ಮಾಡುತ್ತಿದ್ದರು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಬೇಕು.
ಮಹೇಶ್ ಕಡಗದಾಳು
ಪ್ರಾಂತ ಸಹ ಸಂಚಾಲಕ, ಹಿಂದು ಜಾಗರಣ ವೇದಿಕೆ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡ್ರಗ್ ಬಳಕೆಯಾಗುತ್ತಿರುವುದು ಶೋಚನೀಯ ಸಂಗತಿ. ವಿದ್ಯಾರ್ಥಿಗಳು ಈ ಚಟಕ್ಕೆ ಬೀಳದೆ ಶಿಸ್ತನ್ನು ಬೆಳೆಸಿಕೊಂಡು, ಜೀವನದಲ್ಲಿ ಗುರಿ ಸಾಧಿಸುವುದರ ಕಡೆಗೆ ಗಮನಹರಿಸಬೇಕು. 18-23ರ ವಯಸ್ಸು ಚಂಚಲವಾಗಿರುತ್ತದೆ. ಎಲ್ಲ ದುಶ್ಚಟಗಳತ್ತ ಸೆಳೆಯುತ್ತದೆ. ಇತ್ತ ಪೋಲೀಸರು ಅರಿವು ಮೂಡಿಸಬೇಕು. ಹಾಗೆಯೇ ಪಾಲಕರು ಸಹ ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಗಮನವಿಡಬೇಕು.
ಮಣಿಕಂಠ ತ್ರಿಶಂಕರ್, ವಿದ್ಯಾರ್ಥಿ
ನಗರದಲ್ಲಿ ಡ್ರಗ್ಸ್‌ಯೊಂದಿಗೆ ಗಾಂಜಾ ಗುಪ್ತವಾಗಿ ಪೂರೈಕೆಯಾಗುತ್ತಿದೆ. ನಗರದ ಪ್ರತಿಷ್ಠಿತ ಕಾಲೇಜು, ಹಾಸ್ಟೆಲ್‌ಗಳ ಬಳಿ ಗಾಂಜಾ ಮಾರಾಟವಾಗುತ್ತಿದೆ. ಇದು ಬಹಳ ವರ್ಷಗಳಿಂದ ನಡೆಯುತ್ತಿದೆ.
ಇದಕ್ಕೆ ಯಾರೂ ತಡೆ ಹಾಕುತ್ತಿಲ್ಲ. ಗಾಂಜಾದಿಂದ ವಿದ್ಯಾರ್ಥಿಗಳು ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ನಗರದಲ್ಲಿ ಅಪರಾಧ ಚಟುವಟಿಕೆ, ರಸ್ತೆ ಅಪಘಾತಗಳಿಗೂ ಕಾರಣವಾಗುತ್ತಿದೆ. ಇದಕ್ಕೂ ಕಡಿವಾಣ ಹಾಕಬೇಕು.
ಮಂಜು ಹಂಪಾಪುರ, ಸಾರ್ವಜನಿಕರು
ಅಮಲು ಬರಿಸುವ ಮಾದಕ ವಸ್ತುಗಳ ಸೇವನೆಯಿಂದ ಯುವ ಜನರು ಅನೇಕ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗಿ ತನ್ನ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ. ಆರ್ಥಿಕವಾಗಿ ದಿವಾಳಿಯಾಗುತ್ತಿದ್ದಾರೆ. ಇದರಿಂದ ಕುಟುಂಬ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.
ಸಮಾಜ ಮಾದಕ ವಸ್ತುಗಳಿಂದ ಮುಕ್ತವಾಗಿರಬೇಕು. ಇದರ ಬಳಕೆ ಹಾಗೂ ಅಕ್ರಮ ಸಾಗಣೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ.
ಆರ್.ಜೆ.ಲಿಖಿತ್‌ರಾಮ್, ಇಂಜಿನಿಯರಿಂಗ್ ವಿದ್ಯಾರ್ಥಿ