ಬಾಗಲಕೋಟೆ: ರಾಜ್ಯ ಹಾಗೂ ದೇಶದಲ್ಲಿ ನಮ್ಮ ಮಾತೃಭೂಮಿ ಮೇಲೆ ಆಕ್ರಮಣ ನಡೆದಿದೆ. ಇದು ಹಿಂದು ಧರ್ಮದ ಮೇಲೆ ಆಗುತ್ತಿರುವ ದೊಡ್ಡ ಮಟ್ಟದ ಆಘಾತ. ಇದನ್ನು ಕೂಡಲೇ ನಿಲ್ಲಿಸದಿದ್ದರೆ ನಾಡಿನಲ್ಲಿ ರಕ್ತಕ್ರಾಂತಿ ಆಗುತ್ತದೆ. ರೈತರು, ದೇವಾಲಯ, ಮಠಮಾನ್ಯಗಳು, ಸಾಧು ಸಂತರ ಆಸ್ತಿಗಳ ಮೇಲೆ ಆಕ್ರಮಣವನ್ನು ಹಿಂದು ಸಮಾಜ ಎಂದಿಗೂ ಸಹಿಸಲ್ಲ ಎಂದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಭೂಮಿಯನ್ನು ವಕ್ ಆಸ್ತಿ ಎಂದು ಮಾಡುತ್ತಿರುವುದನ್ನು ವಾಪಸ್ಸು ಪಡೆಯುವವರೆಗೆ ಹಿಂದು ಸಮಾಜದ ಹೋರಾಟ ನಿಲ್ಲಲ್ಲ. ಈಗ ಸಾಧು ಸಂತರು ಸಹ ಸುಮ್ಮನೆ ಕೂಡದೇ ಹೋರಾಟಕ್ಕೆ ಸಜ್ಜಾಗಿದ್ದಾರೆ. ಪಹಣೆಯಲ್ಲಿ ವಕ್ ಆಸ್ತಿ ಎನ್ನುವುದನ್ನು ತೆಗೆಯುವವರೆಗೂ ಹೋರಾಟ ಮಾಡಬೇಕು ಎಂದು ನನಗೆ ಅನೇಕ ಸಂತರು ಪೋನ್ ಮಾಡಿ ಹೇಳಿದ್ದಾರೆಂದರು.
ಶತಶತಮಾನಗಳಿಂದಲೂ ಈ ನಾಡು ಭಾರತೀಯ, ಹಿಂದು ಸಂಸ್ಕೃತಿ ಹೊಂದಿದೆ. ಮಣ್ಣಿಗೆ ನಾವು ಮಾತೃಭೂಮಿ ಎನ್ನುತ್ತೇವೆ. ರೈತರು, ಬಡವರು, ದೇವಸ್ಥಾನಗಳು, ಶಾಲೆ, ಕಾಲೇಜುಗಳ ಆರ್ಥಿಕವಾಗಿ ಹೊಂದಿರುವ ವ್ಯವಸ್ಥೆ ಇದಾಗಿದೆ. ಇಂತ ಮಾತೃಭೂಮಿ ಮೇಲೆ ಆಕ್ರಮಣ ಮಾಡಲು ಜಮೀರ್ ಅಹ್ಮದ್, ಸಿದ್ದರಾಮಯ್ಯ, ಮುಸ್ಲಿಂರಿಗೆ ಹಿಂದು ಸಮಾಜ ಅವಕಾಶ ಕೊಡಲ್ಲ. ಇವತ್ತು ಹಾವೇಜಿ ಜಿಲ್ಲೆಯ ಕಡಕೋಳ ಗ್ರಾಮದಲ್ಲಿ ಮುಸ್ಲಿಂರ ಮನೆ ಮೇಲೆ ಕಲ್ಲು ಹೊಡೆದಿದ್ದು ನೋಡಿದ್ದೀರಿ. ನೀವು ವಕ್ ಆಸ್ತಿ ಎಂದು ಇತರರ ಜಮೀನುಗಳನ್ನು ವಶಕ್ಕೆ ಪಡೆಯಲು ಮುಂದಾದರೆ ರಾಜ್ಯಾದ್ಯಂತ ರಕ್ತಕ್ರಾಂತಿಯೇ ಶುರುವಾಗುತ್ತದೆ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದರು.