ಜಿಲ್ಲೆ

ಮಾತೃಭಾಷೆ ತಾಯಿ ಸಮಾನ

ಚಿತ್ರದುರ್ಗ: ಮಾತೃಭಾಷೆ ಮರೆತರೆ ತಾಯಿಯನ್ನೇ ಮರೆತಂತೆ ಎಂದು ಹಿರಿಯ ನಟ ದೊಡ್ಡಣ್ಣ ಹೇಳಿದರು. ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಈಚೆಗೆ ಏರ್ಪಡಿಸಿದ್ದ ‘ಕಾನೂನು ಹಬ್ಬ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಾತೃಭಾಷೆ ತಾಯಿ ಇದ್ದಂತೆ. ಕನ್ನಡದ ಮಹತ್ವವನ್ನು ವಿದ್ಯಾರ್ಥಿಗಳು ಅರಿಯಬೇಕು. ಜ್ಞಾನವೃದ್ಧಿಯಲ್ಲಿ ಮಾತೃಭಾಷೆಗೆ ಅಪಾರವಾದ ಮಹತ್ವವಿದೆ ಎಂದರು.

ಸರಸ್ವತಿ ವಿದ್ಯಾಸಂಸ್ಥೆ ಅಧ್ಯಕ್ಷ, ರಾಜ್ಯಸಭಾ ಮಾಜಿ ಸದಸ್ಯ ಎಚ್. ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಉಪಾಧ್ಯಕ್ಷ ಫಾತ್ಯರಾಜನ್, ಕಾರ್ಯದರ್ಶಿ ಡಿ.ಕೆ. ಶೀಲಾ, ಪ್ರಾಚಾರ್ಯೆ ಡಾ.ಎಂ.ಎಸ್. ಸುಧಾದೇವಿ, ಸಹಾಯಕ ಪ್ರಾಧ್ಯಾಪಕ ಡಾ.ಎನ್.ಡಿ. ಗೌಡ, ವಿದ್ಯಾರ್ಥಿ ಕಾನೂನು ವೇದಿಕೆ ಗೌರವಾಧ್ಯಕ್ಷ ಎಲ್. ಶ್ರೀಶೈಲ, ಅಧ್ಯಕ್ಷ ಎಸ್. ರವಿ, ಕಾರ್ಯದರ್ಶಿ ಸಿ. ವೆಂಕಣ್ಣ ಮತ್ತಿತರರು ಇದ್ದರು.

ಸಮಾರಂಭದ ಅಂಗವಾಗಿ ಆಯೋಜಿಸಿದ್ದ ನಾನಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಿ.ಆರ್. ಭೂಮಿಕಾ ಪ್ರಾರ್ಥಿಸಿದರು. ಎಂ.ಎಸ್. ಹೀನಾ ಕೌಸರ್ ಸ್ವಾಗತಿಸಿ, ಎಸ್. ಉದಯ್‌ಪ್ರಾಣೇಶ್ ಶರ್ಮ ವಂದಿಸಿದರು, ಬಿ.ಸಿ.ಮೇಘನಾ ನಿರೂಪಿಸಿದರು.