ಜಿಲ್ಲೆ

ಮಾತೃತ್ವ ಅಭಿಯಾನ ಪರಿಶೀಲನೆ

ಸರಗೂರು: ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಧಾನಮಂತ್ರಿ ಸುರಕ್ಷಿತಾ ಮಾತೃತ್ವ ಅಭಿಯಾನ ಪಿಎಂಎಸ್‌ಎಂಎ ಕಾರ್ಯಕ್ರಮವನ್ನು ಸೋಮವಾರ ಆರೋಗ್ಯಾಧಿಕಾರಿ ಡಾ ಟಿ.ರವಿಕುಮಾರ್ ಪರಿಶೀಲಿಸಿದರು.

ಕಾರ್ಯಕ್ರಮವು ಪ್ರತಿ ತಿಂಗಳು 9 ಹಾಗೂ 24ರಂದು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆಯುತ್ತದೆ. ಗರ್ಭಿಣಿಯರನ್ನು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ವೈದ್ಯಕೀಯ ತಪಾಸಣೆ ಮಾಡಿಸಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಿಂದ ಪರೀಕ್ಷಿಸುತ್ತಾರೆ. ಉಚಿತವಾಗಿ ರಕ್ತದೊತ್ತಡ, ಎಚ್‌ಬಿ ಪರೀಕ್ಷೆ, ತೂಕವನ್ನು ಪರೀಕ್ಷೆ ಮಾಡಿಸುವುದು, ಗರ್ಭಿಣಿಯರಲ್ಲಿ ತೊಂದರೆಗಳು ಕಂಡುಬಂದಲ್ಲಿ ಸೂಕ್ತ ಸಲಹೆ, ಚಿಕಿತ್ಸೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಪೌಷ್ಟಿಕ ಆಹಾರ ಸೇವನೆ, ಸುರಕ್ಷಿತ ಹೆರಿಗೆ, ಸುರಕ್ಷಿತ ತಾಯಿತನ, ಸುರಕ್ಷಿತ ಶಿಶು ಆರೈಕೆ ಬಗ್ಗೆ ಅರಿವು ಮೂಡಿಸುವುದು, ತಾಯಿ ಮತ್ತು ಶಿಶು ಮರಣವನ್ನು ತಪ್ಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.

ವೈದ್ಯಾಧಿಕಾರಿ ಡಾ.ಪಾರ್ಥಸಾರಥಿ, ರವಿರಾಜ್, ಪುಷ್ಪಾ, ಶಾಂತಿ, ಮಹಾದೇವ, ಮಾನಸಾ, ಶ್ವೇತಾ, ಮಂಜುಳಾ, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು ಹಾಜರಿದ್ದರು.