ಸಕಲೇಶಪುರ: ಯಾವುದೇ ಸಾಧನೆ ಸಾಧಿಸಲು ಮೊದಲು ಮಾತೃ ಭಾಷೆಯಿಂದ ಮಾತ್ರ ಸಾಧ್ಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಹೇಳಿದರು.
ತಾಲೂಕಿನ ಹೆತ್ತೂರು ಹೋಬಳಿ ಬೆಳಗಾರರ ಸಂಘದ ಅವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೆತ್ತೂರು ಹೋಬಳಿ ಘಟಕದ ವತಿಯಿಂದ ಎಸ್‌ಎಸ್‌ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಳಿಸಿದ ಸಂಪತ್ತು ಅಳಿದು ಹೋಗುತ್ತದೆ. ಆದರೆ ಪಡೆದ ಜ್ಞಾನ, ವಿದ್ಯೆ ಶಾಶ್ವತವಾಗಿ ಉಳಿಯುತ್ತದೆ. ಕನ್ನಡ ಭಾಷೆಯು ಬೇರೆಲ್ಲಾ ಭಾಷೆಗಳಿಗಿಂತ ವಿಶೇಷವಾಗಿದ್ದು ತನ್ನದೆ ಆದ ಸಂಸ್ಕೃತಿಯನ್ನು ಹೊಂದಿದೆ. ಕನ್ನಡದ ಶ್ರೀಮಂತಿಕೆ, ಪರಂಪರೆಯನ್ನು ಮತ್ತು ಕನ್ನಡದ ಸೊಗಡನ್ನು ನಾವೆಲ್ಲ ಬೆಳೆಸಬೇಕು. ಈ ಜಾಗತಿಕ ಕಾಲಮಾನದಲ್ಲಿ ಬೇರೆ ಭಾಷೆಗಳ ಕಲಿಯುವಿಕೆ ಅನಿವಾರ್ಯ. ಆದರೆ ಮೊದಲ ಆದ್ಯತೆಯನ್ನು ನಮ್ಮ ಮಾತೃ ಭಾಷೆಗೆ ನೀಡಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತಾಗಬೇಕು. ಉತ್ತಮ ಶಿಕ್ಷಣವನ್ನು ಪಡೆದರೆ ಸಮಾಜದಲ್ಲಿ ಬದಲಾವಣೆ ತರಬಹುದಾಗಿದೆ. ತಂದೆ- ತಾಯಿಯರು ತಮ್ಮ ಮಕ್ಕಳು ಉತ್ತಮವಾಗಿ ಓದಬೇಕೆಂದು ಬಯಸುತ್ತಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಂದೆ-ತಾಯಿಯರ ಆಶಯಕ್ಕೆ ದಕ್ಕೆ ಬಾರದಂತೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಹೆತ್ತೂರು ಹೋಬಳಿಯ 7 ಪ್ರೌಢಶಾಲೆಗಳು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆತ್ತೂರು, ಸಾನ್ವಿ ಪಬ್ಲಿಕ್ ಸ್ಕೂಲ್ ಹೆತ್ತೂರು, ಸಿದ್ದಗಂಗಾ ಪ್ರೌಡಶಾಲೆ ಶುಕ್ರವಾರ ಸಂತೆ, ಮಲ್ಲೇಶ್ವರ ಪ್ರೌಢಶಾಲೆ ಎಚ್.ವಿ. ಹಳ್ಳಿ, ಮುರಾರ್ಜಿ ದೇಸಾಯಿ ವಸತಿ ಶಾಲೆ ಹೆತ್ತೂರು, ಸರ್ಕಾರಿ ಪ್ರೌಢಶಾಲೆ ಹೊಂಗಡಹಳ್ಳ, ಸರ್ಕಾರಿ ಪ್ರೌಢಶಾಲೆ ವಣಗೂರು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಹೆತ್ತೂರಿನ 24 ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಭಾಜನರಾದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೆತ್ತೂರು ಹೋಬಳಿ ಘಟಕ ಅಧ್ಯಕ್ಷ ಎಚ್.ಪಿ ರವಿಕುಮಾರ್, ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಶಿವರಾಜು, ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಎಚ್.ಜಿ ದೇವರಾಜು, ಹೆತ್ತೂರು ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದೀಪು,ಯಶ್ವಸಿ ಮಾರ್ಟ್ ಮಾಲೀಕ ಯಶ್ವಂತ್, ಹೆತ್ತೂರು ಹೋಬಳಿ ಒಕ್ಕಲಿಗರ ಸಂಘದ ಅಧ್ಯಕ್ಷ ರಾಧಾಕೃಷ್ಣ, ಮಾಜಿ ಸೈನಿಕ ವಳಲಹಳ್ಳಿ ನಂದೀಶ್, ಕಸಾಪ ಸಲಹಾ ಸಮಿತಿ ಸದಸ್ಯರಾದ ಸುರೇಶ್, ಹಡ್ಲಹಳ್ಳಿ ರಾಮಚಂದ್ರ, ನಿವೃತ ಶಿಕ್ಷಕ ಲವ, ಕಸಾಪ ಕಾರ್ಯದರ್ಶಿಗಳಾದ ಅತ್ತಿಗನಹಳ್ಳಿ ಸುರೇಶ್, ರೇಷ್ಮ ರಾಮಚಂದ್ರ, ಸದಸ್ಯರಾದ ಕೆ.ಬಿ.ಮಲ್ಲೇಶ್, ಬಾಲುಗೌಡ, ಹೇಮಂತಕುಮಾರ್, ಸುಬ್ರಹ್ಮಣ್ಯ, ವೈಶಾಲಿ ಕೀರ್ತಿ, ಹೊಸಳ್ಳಿ ಜಗನ್ನಾಥ್ ಸೇರಿದಂತೆ ಇತರರು ಇದ್ದರು.