ಕಲಬುರಗಿ: ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳನ್ನು ವಾರದೊಳಗೆ ಈಡೇರಿಸುವುದಾಗಿ ಭರವಸೆ ನೀಡಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತು ತಪ್ಪಿರುವುದಕ್ಕೆ ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಎಂ.ಬಿ. ನಾಡಗೌಡ ಕಿಡಿಕಾರಿದರು.
ಗ್ರಾಪಂ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಕನಿಷ್ಠ ವೇತನ ನೀಡಬೇಕು ಸೇರಿ ೧೯ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಘ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಚಿವರ ಮನೆಗೆ ಚಲೋ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದಾಗ ವಾರದಲ್ಲೇ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಹೇಳಿದ್ದ ಖರ್ಗೆ ಮಾತು ಮರೆತಂತೆ ಕಾಣುತ್ತಿದೆ. ಕಾರ್ಮಿಕ ಸಚಿವ ಸಂತೋಷ ಲಾಡ್ ೩೦ ಸಾವಿರ ರೂ. ಘೋಷಿಸಿದ್ದು, ೩೦ ಪೈಸೆಯೂ ನೀಡಿಲ್ಲ. ಇಬ್ಬರು ಪಬ್ಲಿಸಿಟಿಗಾಗಿ ಹೇಳಿದ್ದಾ? ಇದೇನಾ ನುಡಿದಂತೆ ನಡೆಯುವ ಸರ್ಕಾರ ಎಂದು ಹರಿಹಾಯ್ದರು.
ಒಬ್ಬರಿಗೆ ೩೦೦೦ ರೂ. ವೇತನ ಹೆಚ್ಚಿಸಿ ಪಿಂಚಣಿ ನೀಡುವುದಾಗಿ ಹೇಳಿ ಆರು ತಿಂಗಳಾದರೂ ಕ್ಯಾರೆ ಎನ್ನುತ್ತಿಲ್ಲ. ಏಳು ವರ್ಷದಿಂದ ಮೂಲವೇತನ ಹೆಚ್ಚಿಸಿಲ್ಲ. ಈ ಫೈಲ್‌ಗಳು ವಿಧಾನಸೌಧ ಮೂಲೆಯಲ್ಲಿ ಕೊಳೆಯುತ್ತಿವೆ. ಇಂಥವರನ್ನು ಗ್ರಾಮೀಣಾಭಿವೃದ್ಧಿ ಸಚಿವ ಅಂತ ಕರಿಬೇಕಾ? ಕಲಬುರಗಿ ಜನ ಇಂತವರನ್ನು ಕಳಿಸಿದ್ದೆ ತಪ್ಪಾ? ಅ.೨೨ರೊಳಗೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಹೋರಾಟಗಾರ ಎಂ.ಬಿ. ಸಜ್ಜನ್ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಪೊಲೀಸರು, ಜಿಲ್ಲಾಧಿಕಾರಿ ಮೇಲೆ ಒತ್ತಡ ಹೇರಿ ಹೋರಾಟಕ್ಕೆ ಅವಕಾಶ ನೀಡದಂತೆ ಮಾಡುತ್ತಿದ್ದಾರೆ. ಪ್ರತಿಭಟನೆಗೆ ನೂರೆಂಟು ಬಾಂಡ್‌ಗಳ ಮೇಲೆ ಸಹಿ ತೆಗೆದುಕೊಂಡಿದ್ದಾರೆ. ನೌಕರರನ್ನು ಭಯೋತ್ಪಾದಕರಂತೆ ನೋಡುತ್ತಿದ್ದಾರೆ. ಸಂವಿಧಾನದ ಬಗ್ಗೆ ಮಾತನಾಡುವ ಸಚಿವರ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವದಂತೆ ಹೋರಾಡುವ ಅವಕಾಶ ಇಲ್ಲವೇ ಎಂದು ಗುಡುಗಿದರು.
ಪ್ರಮುಖರಾದ ಜಿ.ರಾಮಕೃಷ್ಣ, ಆರ್.ಎಸ್. ಬಸವರಾಜ, ನಾಗರಾಜ ಭಂಗೂರ, ಶರಣಬಸಪ್ಪ ಮಮಶೆಟ್ಟಿ, ಗೌರಮ್ಮ ಪಾಟೀಲ್, ಎಂ.ಸಜ್ಜನ್, ಮಾರುತಿ ಸುಗ್ಗಾ, ಭೀಮರಾವ ಅಂಬಲಗಿ, ನೀಲಾ ಇತರರಿದ್ದರು.