ಭಾಲ್ಕಿ: ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಕೇಂದ್ರದ ಅಧಿಪತಿ, ಮಹಾತಪಸ್ವಿ ಪೂಜ್ಯ ಕರುಣಾದೇವಿ ಅಮ್ಮ ಅವರು ಅಧ್ಯಾತ್ಮ ಲೋಕದ ಧ್ರುವತಾರೆ. ಅವರ ಶ್ರೇಷ್ಠ ಚಿಂತನೆ, ವಿಚಾರ, ತಪಸ್ಸಿನ ಸಾಧನೆ ಸಮಾಜಕ್ಕೆ ದೊಡ್ಡ ಶಕ್ತಿಯಾಗಿದೆ. ಅವರ ಕೆಲಸ-ಕಾರ್ಯಗಳು ಎಲ್ಲರಿಗೂ ಹೆಮ್ಮೆ ಮತ್ತು ಅಭಿಮಾನ ಮೂಡಿಸುತ್ತವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶಾಸಕ ಈಶ್ವರ ಖಂಡ್ರೆ ಹೇಳಿದರು.
ಧನ್ನೂರ(ಎಚ್) ಗ್ರಾಮದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅಮ್ಮ ಅವರ 60ನೇ ಜನ್ಮ ದಿನೋತ್ಸವ ಉದ್ಘಾಟಿಸಿದ ಅವರು, ಬಾಲತಪಸ್ವಿ ಅಮ್ಮ ಅಭಿನವ ಅಕ್ಕಮಹಾದೇವಿ ಎಂದೇ ಗುರುತಿಸಲ್ಪಟ್ಟಿದ್ದಾರೆ. ಶ್ರೀಶೈಲ, ಕದಳಿವನ, ಕಾಶಿ, ಕೇದಾರ, ಕೂಡಲಸಂಗಮ, ಹರಿದ್ವಾರ ಮೊದಲಾದ ಕ್ಷೇತ್ರಗಳಲ್ಲಿ ಲೋಕ ಕಲ್ಯಾಣಾರ್ಥ ತಪೋನುಷ್ಠಾನ ಮಾಡಿದ್ದಾರೆ. ಇದುವರೆಗೆ 56ಕ್ಕೂ ಅಧಿಕ ತಪೋನುಷ್ಠಾನ ಮಾಡಿ ನಾಡಿಗೆ ಕೀರ್ತಿ ತಂದಿದ್ದಾರೆ ಎಂದು ಬಣ್ಣಿಸಿದರು.
ಸಾನ್ನಿಧ್ಯ ವಹಿಸಿದ್ದ ಬೇಮಳಖೇಡ-ಗೋರ್ಟಾದ ಶ್ರೀ ಡಾ.ರಾಜಶೇಖರ ಶಿವಾಚಾರ್ಯ ಮಾತನಾಡಿ, ಮಾತಾ ಅವರು ಅಧ್ಯಾತ್ಮ ಸಾಧನೆಯಿಂದ ದೇಶದ ಶ್ರೇಷ್ಠ ಸಂತ, ಮಹಾಂತರ ಸಾಲಿನಲ್ಲಿ ನಿಲ್ಲುತ್ತಾರೆ. ಒಬ್ಬ ಮಹಿಳೆಯಾಗಿ ತೋರಿದ ಸಾಧನೆಗೆ ಬೆಲೆ ಕಟ್ಟಲಾಗದು. ಅವರ ಮಾರ್ಗದರ್ಶನದಲ್ಲಿ ನಡೆದವರು ಇಂದು ಸಮಾಜದ ಕಣ್ಮಣಿ ಆಗಿದ್ದಾರೆ. ಶ್ರೀಶೈಲದಲ್ಲಿ ನಡೆಯುವ 60ನೇ ಜನ್ಮ ದಿನೋತ್ಸವ ಐತಿಹಾಸಿಕವಾಗಿ ಮಾಡಲಾಗುವುದು. ಆ ವೇಳೆ ಅಕ್ಕಮಹಾದೇವಿ ಸಮಗ್ರ ಪ್ರಕಟಿತ ಲೇಖನಗಳ ಬೃಹತ್ ಸಂಪುಟ ಮತ್ತು ಸಂಭಾವನೆ ಗ್ರಂಥ ಹೊರತರುವುದಾಗಿ ತಿಳಿಸಿದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆ, ಎನ್ನೆಸ್ಸೆಸ್ಕೆ ಅಧ್ಯಕ್ಷ ಡಿ.ಕೆ. ಸಿದ್ರಾಮ, ಶಿವಯ್ಯ ಸ್ವಾಮಿ, ಗಂಗಾಧರ ಸ್ವಾಮಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಕಾಶೀನಾಥ ಖಂಡ್ರೆ, ಕೆಎಂಎಫ್ ನಿರ್ದೇಶಕ ಬಾಬುರಾವ ಪೊಲೀಸ್ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ಶಿವರಾಜ ಹಾಸನಕರ್, ಪಿಎಸ್ಐ ಚಿದಾನಂದ, ಡಾ.ದೇವಿಕಾ ನಾಗೂರೆ, ಮಲ್ಲಿಕಾರ್ಜುನ ಸ್ವಾಮಿ ಹಿಪ್ಪಳಗೆಮಠ, ಗುಂಡೇರಾವ ಪಾಟೀಲ್, ವಿಷ್ಣುಕಾಂತ ಬಿ.ಜೆ., ವೀರಶೆಟ್ಟಿ ಪಟ್ನೆ, ಸಂಗಮೇಶ ಪಾಟೀಲ್ ಮಳಚಾಪುರ, ಡಾ.ಓಂಕಾರ ಸ್ವಾಮಿ, ಶಿವರಾಜ ಹಾಲಹಳ್ಳಿ, ಬಸವರಾಜ ಜಹೀರಾಬಾದ್, ಸಂಗಮೇಶ ಬಿರಾದಾರ, ಸಿದ್ದು ಫುಲಾರಿ, ಶಿವಕುಮಾರ ಸ್ವಾಮಿ, ಸತೀಶ ಹಾಳೆ, ಅಮರ ಮೋದಿ, ಉಮಾಕಾಂತ ಜೇಮಶೆಟ್ಟೆ, ವಿಶ್ವನಾಥ ದಾನಿ, ವಿಜಯಕುಮಾರ ಹಾಳೆ, ಸೂರ್ಯಕಾಂತ ಜೇಮಶೆಟ್ಟೆ, ಸಿದ್ದು ನೀಲಾ, ಸಿದ್ದು ಕಾಡೋದೆ, ಬಸವರಾಜ ಬಕ್ಕಾ, ಹಣಮಂತ ಇತರರಿದ್ದರು.
ಶ್ರೀ ವೀರಭದ್ರೇಶ್ವರ ನೂತನ ರಥ ನಿರ್ಮಾಣಕ್ಕಾಗಿ ದಾನ ನೀಡಿದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಅವರನ್ನು ಸನ್ಮಾನಿಸಲಾಯಿತು. ಪರಮೇಶ್ವರ ಪಾಟೀಲ್ ದಂಪತಿ ಮಾತಾಜಿ ಪಾದಪೂಜೆ ನೆರವೇರಿಸಿದರು. ರಮೇಶ ಅರಳಿ ಸ್ವಾಗತಿಸಿದರು. ಬಸವರಾಜ ಹಾಲಹಳ್ಳಿ ನಿರೂಪಣೆ ಮಾಡಿದರು. ಶಿವಕುಮಾರ ಪಾಂಚಾಳ ಸಂಗೀತ ಸುಧೆ ಹರಿಸಿದರು.
ಅಷ್ಟಾವರಣ ತುಲಾಭಾರ
60ನೇ ಜನ್ಮ ದಿನೋತ್ಸವ ನಿಮಿತ್ತ ಅಷ್ಟಾವರಣಗಳಾದ ವಿಭೂತಿ, ರುದ್ರಾಕ್ಷ, ಪಾದೋದಕ, ಪ್ರಸಾದ, ಜಂಗಮತ್ವದ ಪ್ರತೀಕ ತತ್ವ ಸಿದ್ಧಾಂತದ ಗ್ರಂಥಗಳಲ್ಲಿ ಮಾತಾಜಿ ತುಲಾಭಾರ ನಡೆಸಿದ್ದು ವಿಶೇಷ. ಇದಕ್ಕೆ ಮಾತಾಜಿ ಒಪ್ಪಿಗೆ ನೀಡಿರಲಿಲ್ಲ. ಆದರೂ ಭಕ್ತರ ಛಲಬಿಡದ ಪ್ರಾರ್ಥನೆಗೆ ಮನ್ನಣೆ ನೀಡಿದ್ದರಿಂದ ಅರ್ಥಪೂರ್ಣ ತುಲಾಭಾರ ಜರುಗಿತು. ಕಾರ್ಯಕ್ರಮಕ್ಕೆ ಮುನ್ನ ಸಭಾಂಗಣಕ್ಕೆ ಮಾತಾರನ್ನು ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು. ವೀರಶೈವ ರಕ್ಷಣಾ ವೇದಿಕೆ, ಶಾಂಭವಿ ಮಹಿಳಾ ಆಧ್ಯಾತ್ಮಿಕ ವೇದಿಕೆ, ಬಜರಂಗದಳ ಮತ್ತು ಗ್ರಾಮಸ್ಥರಿಂದ ಕಾರ್ಯಕ್ರಮ ನಡೆಯಿತು. ಧನ್ನೂರ ಮಾತಾಜಿ ಹುಟ್ಟೂರು. ಹೀಗಾಗಿ ತವರಿನ ಸತ್ಕಾರ ವಿಶಿಷ್ಟ ಎನಿಸಿತು.
ಪೂಜ್ಯ ಕರುಣಾದೇವಿ ಅಮ್ಮ ಅಮೋಘ ಸಾಧನೆ ಮತ್ತು ಸತತ ಪರಿಶ್ರಮ ಫಲವಾಗಿ ಆಂಧ್ರದ ಶ್ರೀಶೈಲ ಮಹಾಕ್ಷೇತ್ರದಲ್ಲಿ ಮಹಾಶರಣೆ ಶ್ರೀ ಅಕ್ಕಮಹಾದೇವಿ ಸ್ಮಾರಕ ನಿರ್ಮಿಸುತ್ತಿರುವುದು ಹೆಮ್ಮೆ ಸಂಗತಿ. ಮಾತಾಜಿ ಅವರ ಷಷ್ಠೃಬ್ಧಿಪೂರ್ಣ ಗುರುವಂದನೆ ಸಮಾರಂಭ ಶ್ರೀಶೈಲದಲ್ಲಿ ಅದ್ದೂರಿಯಾಗಿ ನಡೆಸೋಣ.| ಈಶ್ವರ ಖಂಡ್ರೆಭಾಲ್ಕಿ ಶಾಸಕ
ವೀರಶೈವ ರಕ್ಷಣಾ ವೇದಿಕೆ, ಶಾಂಭವಿ ಮಹಿಳಾ ಆಧ್ಯಾತ್ಮಿಕ ವೇದಿಕೆ, ಬಜರಂಗದಳ ಸೇರಿ ವಿವಿಧ ಸಂಘಟನೆ ಮತ್ತು ಸ್ಥಳೀಯ ನಾಗರಿಕರು ಅಪೂರ್ವ ಸಮಾರಂಭ ನಡೆಸುವ ಮೂಲಕ ಪೂಜ್ಯ ಕರುಣಾದೇವಿ ಅಮ್ಮ ಅವರಿಗೆ ತವರಿನ ಉಡಗೊರೆ ನೀಡಿದ್ದಾರೆ.| ಶ್ರೀ ರಾಜಶೇಖರ ಶಿವಾಚಾರ್ಯಬೇಮಳಖೇಡ-ಗೋರ್ಟಾ