ಜಿಲ್ಲೆ

ಮಾಡಿರುವ ಕೆಲಸ ತೃಪ್ತಿ ತಂದಿದೆ

ಹುಬ್ಬಳ್ಳಿ: ‘ಕಳೆದ 2 ವರ್ಷ 5 ತಿಂಗಳುಗಳ ಕಾಲ ನಾನು ಮಾಡಿರುವ ಕೆಲಸದ ಬಗ್ಗೆ ನನಗೆ ತೃಪ್ತಿ ಇದೆ. ಈ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಬಂದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಗರಿಷ್ಠ ಮಟ್ಟದ ಪ್ರಯತ್ನ ಮಾಡಿದ್ದೇನೆ’ ಎಂದು ನೈಋತ್ಯ ರೈಲ್ವೆ ಮಹಾಪ್ರಬಂಧಕ ಅಜಯ ಕುಮಾರ ಸಿಂಗ್ ಹೇಳಿದರು.

ಮಾ. 31ರಂದು ಸೇವಾ ನಿವೃತ್ತಿ ಹೊಂದಲಿರುವ ಅವರು ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಾನು ನನ್ನ ಸೇವಾವಧಿಯಲ್ಲಿ 10 ರಾಜ್ಯಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ. ನನ್ನ ಪ್ರಕಾರ ಕರ್ನಾಟಕವು ಸಾಕಷ್ಟು ಸುಧಾರಿತ ಹಾಗೂ ಉತ್ತಮ ರಾಜ್ಯಗಳಲ್ಲಿ ಒಂದು. ಇಲ್ಲಿಯ ಜನ ನನ್ನನ್ನು ಹೊರಗಿನವನು ಎಂದು ಭಾವಿಸಲಿಲ್ಲ. ಬೇರೆ ಕೆಲ ರಾಜ್ಯಗಳಲ್ಲಿ ಹೊರಗಿನವರನ್ನು ತಾರತಮ್ಯದಿಂದ ನೋಡುವ ಮನೋಭಾವ ಇದೆ. ಕರ್ನಾಟಕ ನನಗೆ ಅದ್ಭುತ ಅನುಭವ ನೀಡಿದೆ. ನಿವೃತ್ತಿ ಜೀವನವನ್ನು ವಾರಾಣಸಿ(ತಂದೆಯ ಮನೆ)ಯಲ್ಲಿ ಕಳೆಯುತ್ತೇನೆ’ ಎಂದರು.

‘ಸ್ವಭಾವತಃ ನಾನು ನಿನ್ನೆ ಮತ್ತು ನಾಳೆಯಲ್ಲಿ ನಂಬಿಕೆ ಇಡುವುದಿಲ್ಲ. ಇಂದು ಏನು ಕೆಲಸ ಮಾಡಬೇಕಾಗಿದೆ ಎಂಬುದಷ್ಟೇ ನನಗೆ ಗೊತ್ತಿರುವುದು. ನನ್ನ ಅವಧಿಯಲ್ಲಿ ಬಹುತೇಕ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಮುಗಿಸಿದ್ದೇನೆ ಎಂಬ ಸಮಾಧಾನವಿದೆ. 100 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಯಾರ್ಡ್ ನವೀಕರಣ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದೆ. ವಿಶ್ವದ ಅತಿ ದೊಡ್ಡ 1505 ಮೀಟರ್ ಉದ್ದದ ಹುಬ್ಬಳ್ಳಿ ರೈಲ್ವೆ ಪ್ಲಾಟ್​ಫಾರಂ (ನಂ. 7 ಮತ್ತು 8) ಸದ್ಯದಲ್ಲೇ ಉದ್ಘಾಟನೆಯಾಗಲಿದೆ ಎಂಬುದನ್ನು ಸಾಧನೆಗಳಲ್ಲಿ ಪಟ್ಟಿ ಮಾಡಬಹುದು’ ಎಂದು ಹೇಳಿದರು.

ಆಡಳಿತದಲ್ಲಿ ಎಲ್ಲ ರೀತಿಯ ಜನರನ್ನು ನಿಭಾಯಿಸಬೇಕಾಗುತ್ತದೆ. ಮುಖ್ಯಸ್ಥನಾದವನು ಒಳ್ಳೆಯವನಾಗಿದ್ದರೆ ಆಡಳಿತ ಯಂತ್ರ ಸರಿಯಾಗಿ ಸಾಗುತ್ತದೆ. ಕೆಟ್ಟವರು ಸಹ ಸರಿದಾರಿಗೆ ಬರುತ್ತಾರೆ. ಮುಖ್ಯಸ್ಥ ಕೆಟ್ಟವನಾಗಿದ್ದರೆ ಆಡಳಿತ ಹಾಳಾಗುತ್ತದೆ. ಒಂದಿಷ್ಟು ಒಳ್ಳೆಯವರು ಸಹ ಕೆಟ್ಟವರಾಗಿ ಪರಿವರ್ತನೆಯಾಗುತ್ತಾರೆ. ನೈಋತ್ಯ ರೈಲ್ವೆಯಲ್ಲಿ ನಾವೆಲ್ಲ ಒಂದು ತಂಡವಾಗಿ ಕೆಲಸ ಮಾಡಿದ್ದೇವೆ ಎಂದರು.

207 ಕಿ.ಮೀ. ಮಾರ್ಗ ನಿರ್ಮಾಣ

ಕಳೆದ 2 ವರ್ಷಗಳ ಅವಧಿಯಲ್ಲಿ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಾಕಷ್ಟು ಕೆಲಸಗಳಾಗಿವೆ. 50 ಕಿ.ಮೀ. ಹೊಸ ಮಾರ್ಗ ಸೇರಿದಂತೆ 363 ಕಿ.ಮೀ. ರೈಲು ಮಾರ್ಗ ನಿರ್ಮಾಣ ಮಾಡಿದ್ದು ಉತ್ತಮ ಸಾಧನೆಯಾಗಿದೆ. ಇದರಲ್ಲಿ 2020-21ನೇ ಸಾಲಿನಲ್ಲಿ 207 ಕಿ.ಮೀ. ರೈಲು ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದ್ದು ಭಾರತೀಯ ರೈಲ್ವೆಯ 17 ವಲಯಗಳಲ್ಲಿ ಒಂದು ದಾಖಲೆಯಾಗಿದೆ ಎಂದು ಉಪ ಮಹಾ ಪ್ರಬಂಧಕಿ ಇ. ವಿಜಯಾ ತಿಳಿಸಿದರು.

ರೈಲ್ವೆ ವಲಯವೊಂದರ ಎಲ್ಲ ನಿಲ್ದಾಣಗಳಲ್ಲಿ ಪ್ರಯಾಣಿಕರಿಗಾಗಿ ವೈ-ಫೈ ಸೌಲಭ್ಯ ಕಲ್ಪಿಸಿದ ದೇಶದ ಮೊದಲ ರೈಲ್ವೆ ವಲಯ ಇದಾಗಿದೆ. ಕಳೆದ 2 ವರ್ಷಗಳಲ್ಲಿ ಪ್ರಯಾಣಿಕ ಸೌಲಭ್ಯಗಳಿಗೆ 176 ಕೋಟಿ ರೂ. ವ್ಯಯಿಸಲಾಗಿದೆ. ಧಾರವಾಡ, ದಾವಣಗೆರೆ, ಬೆಳಗಾವಿ ನಿಲ್ದಾಣಗಳಿಗೆ ಹೊಸ ಕಟ್ಟಡ ನಿರ್ವಿುಸಲಾಗಿದೆ. 2020ರಲ್ಲಿ ಶೇ. 400ರಷ್ಟಿದ್ದ ಕಾರ್ಯಾಚರಣೆ ಅನುಪಾತ (ವೆಚ್ಚ ಮತ್ತು ಆದಾಯ ನಡುವಿನ ಅಂತರ) 2021ರ ಫೆಬ್ರುವರಿಗೆ ಶೇ. 132ಕ್ಕೆ ಇಳಿಕೆಯಾಗಿದೆ ಎಂದು ಹೇಳಿದರು.

ಕರೊನಾ ಸೋಂಕಿನ ಪೂರ್ವ 86 ಮೇಲ್/ಎಕ್ಸ್​ಪ್ರೆಸ್ ರೈಲುಗಳನ್ನು ಓಡಿಸಲಾಗುತ್ತಿತ್ತು. ಇದೀಗ 61 ಮೇಲ್/ಎಕ್ಸ್​ಪ್ರೆಸ್ ರೈಲುಗಳು ಸಂಚರಿಸುತ್ತಿವೆ. ಇದು ಉಳಿದ ರೈಲ್ವೆ ವಲಯಗಳಿಗೆ ಹೋಲಿಸಿದರೆ ಗರಿಷ್ಠ ಪ್ರಮಾಣದ್ದಾಗಿದೆ. ಪ್ಯಾಸೆಂಜರ್ ರೈಲು ಓಡಾಟ ಇನ್ನೂ ಆರಂಭಗೊಂಡಿಲ್ಲ ಎಂದರು.

ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ಇದ್ದರು.

EndFragment