ಹಾಸನ: ರಾಜಕೀಯ ಕ್ಷೇತ್ರದಲ್ಲಿ ದೇಶ ರಕ್ಷಣೆ ಮಾಡಿ ಬಂದಿರುವ ಮಾಜಿ ಸೈನಿಕರಿಗೆ ಮೀಸಲಾತಿ ನೀಡಿಬೇಕು ಎಂದು ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಗೋವಿಂದೇಗೌಡ ಅವರು ಒತ್ತಾಯಿಸಿದರು.
ಇಡೀ ದೇಶದ ರಕ್ಷಣೆಗಾಗಿ ಶ್ರಮಿಸುತ್ತಿರುವ ಯೋಧರು ಹಾಗು ದೇಶದ ಜನರಿಗಾಗಿ ಶ್ರಮಿಸುತ್ತಿರುವ ರೈತರ ಸ್ಥಿತಿ ಅತಂತ್ರವಾಗಿದೆ. ದೇಶದಲ್ಲಿ ರೈತರು, ಯೋಧರು ಚೆನ್ನಾಗಿ ಇದ್ದರೆ ಮಾತ್ರ ದೇಶದ ಏಳಿಗೆ ಸಾಧ್ಯ. ಈ ನಿಟ್ಟಿನಲ್ಲಿ ನಿವೃತ್ತ ಯೋಧರಿಗೆ ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ನೀಡಬೇಕೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ದೇಶ ಕಾಯುವ ಎಲ್ಲಾ ಯೋಧರಿಗೆ ಯಾವುದೇ ಜಾತಿ, ಧರ್ಮದ ಭೇದವಿಲ್ಲ. ಸರ್ವರೂ ಸಮಾನರು ಎಂದು ದೇಶಕ್ಕಾಗಿ ಶ್ರಮಿಸುತ್ತಿದೇವೆ. ಆದರೆ, ಸೇನೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾದ ಯೋಧರ ನಂತರದ ದಿನಗಳಲ್ಲಿನ ಜೀವನ ದುಸ್ಥಿತಿಯಲ್ಲಿ. ನಿವೃತ್ತ ಯೋಧರು ಖಾಸಗಿ ವ್ಯವಸ್ಥೆಗಳಲ್ಲಿ ಸೆಕ್ಯೂರಿಟಿಯಾಗಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಧ್ವನಿ ಎತ್ತುವ ಒಂದೇ ಒಂದು ವ್ಯವಸ್ಥೆಯು ನಮ್ಮ ದೇಶದಲ್ಲಿ ಇಲ್ಲ. ಈಗಿರುವಾಗ ದೇಶದಲ್ಲಿ ಯೋಧರ ಕಷ್ಟ ಕಾರ್ಪಣ್ಯಗಳ ಬಗ್ಗೆ ವಾಸ್ತವದಲ್ಲಿ ನಿವೃತ್ತಿ ಹೊಂದಿದ ಯೋಧರ ಜೀವನದ ಬಗ್ಗೆ ಲೋಕಸಭೆ ಹಾಗು ವಿಧಾನ ಸಭೆಯಲ್ಲಿ ಧ್ವನಿ ಎತ್ತುವ ಸಲುವಾಗಿ ಆದರೂ ರಾಜಕೀಯ ಮೀಸಲಾತಿ ಬೇಕಾಗಿದೆ ಎಂದರು.
ನಿವೃತ್ತ ಯೋಧರಿಗೆ ಎಂದು ಮೀಸಲಿರುವ ಜಮೀನು ಸಹ ನಿವೃತ್ತ ಯೋಧರಿಗೆ ದೊರೆಯುತ್ತಿಲ್ಲ. ಈ ಬಗ್ಗೆ ಯಾವುದೇ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುವುದು ಇಲ್ಲ. ದೇಶದಲ್ಲಿ ಬಹುತೇಕ ರೈತರ ಮಕ್ಕಳು ಮಾತ್ರ ಯೋಧರಾಗುತ್ತಾರೆ. ಆದರೆ, ರಾಜಕಾರಣಿಗಳು, ಉದ್ಯಮಿಗಳ ಮಕ್ಕಳು ಸಿರಿವಂತರು ಯಾರು ಸೇನೆ ಸೇರುವುದಿಲ್ಲ. ಇದನ್ನು ಗಮನದಲ್ಲಿ ಇರಿಸಿಕೊಂಡು ರಾಜ್ಯದಲ್ಲಿ ಒಂದು ಲೋಕಸಭಾ ಕ್ಷೇತ್ರ, ಕನಿಷ್ಠ ಐದು ವಿಧಾನಸಭಾ ಕ್ಷೇತ್ರ ಹಾಗು ಸ್ಥಳೀಯ ಮಟ್ಟದ ಚುನಾವಣೆಗಳಲ್ಲಿ ಸಾಧ್ಯವಾದಷ್ಟು ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ವೆಂಕಟೇಶ್, ಪದಾಧಿಕಾರಿಗಳಾದ ಬಾಲಕೃಷ್ಣ, ಪ್ರದೀಪ್, ಚಂದ್ರೇಗೌಡ, ಬಸವರಾಜ್ ಹಾಜರಿದ್ದರು.