ಜಿಲ್ಲೆ

ಮಾಜಿ ಸೈನಿಕರಿಂದ ಪ್ರತಿಭಟನೆ: ನಿವೇಶನ ಮಂಜೂರು ವಿಳಂಬಕ್ಕೆ ಖಂಡನೆ

ಕುಣಿಗಲ್​ ಸೈನಿಕರು ಹಾಗೂ ಮಾಜಿ ಸೈನಿಕರಿಗೆ ಜಮೀನು ಮಂಜೂರು ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ತಾಲೂಕು ಆಡಳಿತದ ಕ್ರಮ ಖಂಡಿಸಿ ತಾಲೂಕು ಮಾಜಿ ಸೈನಿಕರ ಸಂದ ಪದಾಧಿಕಾರಿಗಳು ಬುಧವಾರ ಹುಚ್ಚಮಾಸ್ತಿಗೌಡ ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ರಾಜ್ಯಾಧ್ಯಕ್ಷ ಶಿವಣ್ಣ ಮಾತನಾಡಿ, ತಾಲೂಕಿನ ಸೈನಿಕರು ಹಾಗೂ ಮಾಜಿ ಸೈನಿಕರು ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅನಗತ್ಯ ವಿಳಂಬ ಮಾಡದೇ ನಿಗದಿತ ಅವಧಿಯಲ್ಲಿ ಜ್ಯೇಷ್ಠತೆಯ ಆಧಾರದ ಮೇಲೆ ಕ್ರಮಕೈಗೊಂಡು ಮೂರು ತಿಂಗಳ ಒಳಗೆ ಅರ್ಜಿ ವಿಲೇವಾರಿ ಮಾಡುವಂತೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು 2021ರ ಜೂನ್​ 24ರಂದೇ ಸುತ್ತೋಲೆ ಹೊರಡಿಸಿದ್ದರೂ ಈವರೆಗೂ ಅರ್ಜಿಗಳು ವಿಲೇವಾರಿ ಮಾಡದೇ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಭಾವಿಗಳ ಒತ್ತಡ: ಈ ಹಿಂದೆ ಮಾದಪ್ಪನಹಳ್ಳಿ ಸರ್ವೇ ನಂಬರ್​ 23/5ರಲ್ಲಿ ಐದು ಜನ ಮಾಜಿ ಸೈನಿಕರಿಗೆ ಭೂ ಮಂಜೂರಾಗಿದ್ದು, ಈ ಜಮೀನನ್ನು ಸ್ಥಳಿಯ ಪ್ರಭಾವಿಗಳು ಸ್ವಾಧಿನ ಪಡಿಸಿಕೊಂಡು ಮಾಜಿ ಸೈನಿಕರ ಕುಟುಂಬಗಳಿಗೆ ಅನ್ಯಾಯ ಮಾಡಿದ್ದಾರೆ. ಈ ಸಂಬಂಧ ಮಾಜಿ ಸೈನಿಕನ ಪತ್ನಿ ವಿಜಯ ಕುಮಾರಿ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ಬಿಡಿಸಿಕೊಡುವಂತೆ ಆನೇಕ ಬಾರಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಕ್ರಮಕೈಗೊಳ್ಳುವಲ್ಲಿ ತಹಸೀಲ್ದಾರ್​ ವಿಫಲವಾಗಿದ್ದಾರೆ ಎಂದು ಶಿವಣ್ಣ ದೂರಿದರು.

ತಹಸೀಲ್ದಾರ್​ ಮಹಬಲೇಶ್ವರ ಮಾತನಾಡಿ, ಸರ್ಕಾರ ನಿಯಮದ ಪ್ರಕಾರ ಸರ್ಕಾರಿ ಖಾಲಿ ಜಮೀನನ್ನು ಗುರುತಿಸಿ ಶೇ.10ಸೈನಿಕರಿಗೆ ಮೀಸಲಿಟ್ಟು ಹಂಚಿಕೆ ಮಾಡಲು ಕ್ರಮಕೈಗೊಳ್ಳಲಾಗುವುದು, ಕೆಲವೊಂದು ದಾಖಲೆಗಳು ನನ್ನ ಅವಧಿಯಲ್ಲಿ ಆಗಿರುವುದಲ್ಲ, ಹಿಂದೆ ಏನಾದರೂ ತಪ್ಪಾಗಿದ್ದರೆ ಅದನ್ನು ಸರಿಪಡಿಸಿ ನ್ಯಾಯದೊರಕಿಸಿಕೊಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸೈನಿಕರು ಪ್ರತಿಭಟನೆ ಕೈ ಬಿಟ್ಟರು.

ಕಾರ್ಡ್​ ಬ್ಯಾಂಕ್​ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್​, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಸ್​.ಬಲರಾಮ್​, ಮುಖಂಡ ಎಚ್​.ಡಿ.ರಾಜೇಶ್​ಗೌಡ ಸಾಥ್​, ಸೈನಿಕರ ಸಂದ ತಾಲೂಕು ಅಧ್ಯಕ್ಷ ಎ.ಆರ್​.ರಮೇಶ್​, ಕಾರ್ಯದರ್ಶಿ ನಾಗರಾಜು, ನಿವೃತ್ತ ಸೈನಿಕರಾದ ಮರಿಗೌಡ, ರಾಮ್​ರಾವ್​, ಸಂತೋಷ್​, ಜಯಣ್ಣ, ಮೋಹನ್​ರಾವ್​, ವೇಣು, ವಾಸು, ಪ್ರಕಾಶ್​ ಇದ್ದರು.

ಆಸ್ತಿಗಾಗಿ ನಕಲಿ ದಾಖಲೆ ಸೃಷ್ಟಿ: ಕಸಬಾ ಹೋಬಳಿಯ ಕೂತಾರಹಳ್ಳಿಯಲ್ಲಿ ಪಿತ್ರಾರ್ಜಿತವಾಗಿ ದಾನವಾಗಿ ಬಂದಿರುವ 28 ಗುಂಟೆ ಜಮೀನನ್ನು ಶಿವರಾಮ ಎಂಬುವವರು ನಕಲಿ ದಾಖಲೆ ಸೃಷ್ಟಿಸಿ, ಪೌತಿವಾರಸುದಾರರ ಮೇರೆಗೆ ನನ್ನನು ಮೃತಪಟ್ಟಿದ್ದಾಳೆ ಎಂದು ನಕಲಿ ದಾಖಲೆ ಸೃಷ್ಟಿಸಿ ಆಸ್ತಿಯನ್ನು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಹೀಗಾಗಿ ನ್ಯಾಯ ದೊರಕಿಸಿಕೊಡುವಂತೆ ತಹಸೀಲ್ದಾರ್​ಗೆ ಮಾಜಿ ಸೈನಿಕನ ಪತ್ನಿ ಲೋಲಾಕ್ಷ$ಮ್ಮ ಮನವಿ ಮಾಡಿದರು.

ತಾಲೂಕು ಭೂ ಮಂಜೂರಾತಿ ವಿಭಾಗದ ದಾಖಲೆಯಂತೆ ಜಮೀನಿಗಾಗಿ ಸುಮಾರು 90 ಸೈನಿಕ ಹಾಗೂ ಮಾಜಿ ಸೈನಿಕರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಕೇವಲ 10 ಜನರಿಗೆ ಜಮೀನು ಮಂಜೂರು ಮಾಡಿ, ಉಳಿದ ಫಲಾನುಭವಿಗಳ ದಾಖಲೆಗಳು ಸಮರ್ಪಕವಾಗಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. > ಶಿವಣ್ಣ, ಮಾಜಿ ಸೈನಿಕರ ಸಂದ ರಾಜ್ಯಾಧ್ಯಕ್ಷ