ಮೈಸೂರು: ಅಲ್ಪಾವಧಿ ಮುಖ್ಯಮಂತ್ರಿ ಅಗಿದ್ದರೂ ಇಡೀ ರಾಜ್ಯವೇ ಮೆಚ್ಚುವಂತಹ ಕಾರ್ಯಗಳನ್ನು ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರು ಮಾಡುವ ಮೂಲಕ ತಮ್ಮದೇ ಛಾಪು ಉಳಿಸಿ ಹೋಗಿದ್ದಾರೆ ಎಂದು ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಬಣ್ಣಿಸಿದರು.
ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ 30ನೇ ಪುಣ್ಯಸ್ಮರಣೆ ಅಂಗವಾಗಿ ಕಲಾಮಂದಿರದ ಆವರಣದಲ್ಲಿ ಮಂಗಳವಾರ ಗುಂಡೂರಾವ್ ಅಭಿಮಾನಿಗಳ ಬಳಗ ಆಯೋಜಿಸಿದ್ದ ‘ಗುಂಡೂರಾಯರ ನೆನಪಿನಂಗಳ’ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಬಡ ವರ್ಗದವರಿಗೆ ಸರ್ಕಾರಿ ಕೆಲಸ ನೀಡುವ ಮೂಲಕ ಅವರ ಜೀವನದ ಆರ್ಥಿಕ ಪರಿಸ್ಥಿತಿ ನಂದಾದೀಪವಾಗಿ ಲಕ್ಷಾಂತರ ಮಂದಿ ಸ್ವಾಭಿಮಾನಿಗಳಾಗಿ ದುಡಿಯಲು ಪ್ರೇರಣೇ ನೀಡಿದರು. ನೌಕರರ ವೇತನ ಪರಿಷ್ಕರಣೆಗಾಗಿ ಪೇ ಕಮಿಷನ್ ಜಾರಿಗೆ ತಂದರಲ್ಲದೇ ಏಷ್ಯಾದಲ್ಲೇ ಪ್ರಥಮವಾಗಿ ಬೆಂಗಳೂರಿನಲ್ಲಿ ಕೇಂದ್ರ ರೈಲ್ವೆ ನಿಲ್ದಾಣದ ಪಕ್ಕದಲ್ಲೇ ನಗರ ಮತ್ತು ಗ್ರಾಮೀಣ ಬಸ್ ನಿಲ್ದಾಣ ಸ್ಥಾಪಿಸುವ ಮಹತ್ವ ಕಾರ್ಯ ಮಾಡಿದರು. ಕುಗ್ರಾಮದಲ್ಲಿರುವ ಬಡವರಿಗೆ ಉಚಿತ ವಿದ್ಯುತ್ ಯೋಜನೆ, ಬೆಂಗಳೂರಿಗೆ ಕಾವೇರಿ ನೀರು ಸಮರ್ಪಕ ಪೂರೈಕೆ ಸೇರಿದಂತೆ ಸಾಕಷ್ಟು ಜನಪರ ಯೋಜನೆಗಳನ್ನು ತಮ್ಮ ಅವಧಿಯಲ್ಲಿ ಅನುಷ್ಠಾನಗೊಳಿಸಿದ್ದಾರೆ ಎಂದರು.
ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ನಗರದ ಸಾಂಸ್ಕೃತಿಕ ಕಟ್ಟಡ ಕಲಾಮಂದಿರ ನಿರ್ಮಾಣದ ಕನಸಿನ ರೂವಾರಿ ಆರ್.ಗುಂಡೂರಾವ್. ರಾಜ್ಯ ಸಂಸ್ಕೃತಿ ಚಿಂತನೆ ಜನಮಾನಸದಲ್ಲಿ ಮೈಗೂಡಿಸಿಕೊಳ್ಳಬೇಕೆಂಬ ಆಶಯ ಹೊಂದಿದ್ದರು. ಪ್ರತಿ ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರಗಳಲ್ಲಿ ಸಾಂಸ್ಕೃತಿಕ ಭವನಗಳನ್ನು ಸರ್ಕಾರದ ವೆಚ್ಚದಲ್ಲೇ ನಿರ್ಮಿಸಿಕೊಡಬೇಕೆಂಬ ಆಶಯದಿಂದ ಇಂತಹ ಭವ್ಯವಾದ ಕಲಾಮಂದಿರಕ್ಕೆ ಬುನಾದಿ ಹಾಕಿದ್ದರು ಎಂದು ಹೇಳಿದರು.
ಇಂತಹ ಕಟ್ಟಡದಲ್ಲಿಯೇ ಅವರ ಸಂಸ್ಮರಣೆಗೆ ಪ್ರತಿಮೆಯೂ ಇಲ್ಲದಿರುವುದು ವಿಷಾದಕರ ಸಂಗತಿ. ಕೂಡಲೇ ಸರ್ಕಾರ, ಕನ್ನಡ ಸಂಸ್ಕೃತಿ ಇಲಾಖೆ ಗುಂಡೂರಾಯರ ಪ್ರತಿಮೆಯನ್ನು ಮುಂಭಾಗದಲ್ಲಿ ಸ್ಥಾಪಿಸಿ, ಕಲಾಮಂದಿರಕ್ಕೆ ಆರ್.ಗುಂಡೂರಾವ್ ಕರ್ನಾಟಕ ಕಲಾಮಂದಿರ ಎಂದು ನಾಮಕರಣ ಮಾಡಬೇಕೆಂದು ಆಗ್ರಹಿಸಿದರು.
ಗುಂಡೂರಾವ್ ಅಭಿಮಾನಿಗಳ ಬಳಗದ ಅಧ್ಯಕ್ಷ ವಿನಯ್ ಕಣಗಾಲ್ ಮಾತನಾಡಿ, ಮೈಸೂರಿನಲ್ಲಿ ನೆರವೇರಿದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ ಕಲಾಮಂದಿರ ತಲೆ ಎತ್ತಿದ್ದು, ಇದರ ಹಿಂದೆ ಗುಂಡೂರಾಯರ ಚಿಂತನೆ ಮತ್ತು ತಾಂತ್ರಿಕ ಪರಿಕಲ್ಪನೆ ಬಹಳಷ್ಟಿದೆ ಎಂದರು.
ಮೈಸೂರಿನಲ್ಲಿ ಬ್ರಿಟಿಷ್ ಆಳ್ವಿಕೆ ರಾಜಾಶ್ರಯವಿದ್ದಾಗ ಬಹಳಷ್ಟು ಕಟ್ಟಡಗಳು ನಿರ್ಮಾಣವಾದವು. ಆದರೆ ಪ್ರಜಾಪ್ರಭುತ್ವ ಬಂದ ನಂತರ ಕಲಾಮಂದಿರವೇ ಮೊದಲ ಕಟ್ಟಡ ಕನ್ನಡಕ್ಕಾಗಿ ಸ್ಥಾಪನೆಯಾಯಿತು. ಅದಕ್ಕೆ ಕೆಲವರು ಎಷ್ಟೇ ವಿರೋಧಿಸಿದರೂ ಸಾಂಸ್ಕೃತಿಕ ರಾಜಧಾನಿಯಲ್ಲಿ ಕನ್ನಡ ಭಾಷೆ, ಕಲೆ, ಸಾಹಿತ್ಯ, ಜನಪದ ಶೈಲಿಯ ಅಸ್ತಿತ್ವ ಉಳಿಯಲು ದಿಟ್ಟ ನಡೆ ಅನುಸರಿಸಿದರು ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ಕಾಂಗ್ರೆಸ್ ಯುವ ಮುಖಂಡ ಸಿ.ಎಸ್.ರಘು, ಮುಡಾ ಮಾಜಿ ಸದಸ್ಯೆ ಲತಾ ಮೋಹನ್, ಮುಖಂಡರಾದ ವಿಜಯ್‌ಕುಮಾರ್, ರೈಲ್ವೆ ರಾಮಣ್ಣ, ಸುಬ್ಬಣ್ಣ, ಪವನ್ ಸಿದ್ದರಾಮ, ಎಸ್.ಎನ್.ರಾಜೇಶ್, ರಾಕೇಶ್, ಪಣೀಶ್, ಸುಚೀಂದ್ರ, ವಿದ್ಯಾ, ಚಕ್ರಪಾಣಿ, ಇನ್ನಿತರರು ಇದ್ದರು.