ಜಿಲ್ಲೆ

ಮಾಜಿ ಸಚಿವ ಎಚ್.ಆಂಜನೇಯ ಅವರನ್ನು ಎಂ.ಎಲ್.ಸಿ ಮಾಡುವಂತೆ ಒತ್ತಾಯ

ಹಾಸನ: ದಲಿತ, ಶೋಷಿತ,ಅಲಕ್ಷಿತ ಸಮುದಾಯಗಳ ನಾಯಕ ಮಾಜಿ ಸಚಿವ ಎಚ್.ಆಂಜನೇಯ ಅವರನ್ನು ಕಾಂಗ್ರೆಸ್ ಸರ್ಕಾರದಲ್ಲಿ ಎಂ.ಎಲ್.ಸಿ. ಮಾಡಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮಾದಿಗ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಪಿ ಶಂಕರ್ ರಾಜು ಆಗ್ರಹಿಸಿದರು.
ಆಂಜನೇಯ ಅವರು ಶೋಷಿತ ತಳ ಸಮುದಾಯಗಳ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದು, ಧ್ವನಿ ಇಲ್ಲದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡುವ ಮೂಲಕ ರಾಜ್ಯದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಅತ್ಯಲ್ಪ ಮತಗಳ ಅಂತರದಿಂದ ಸೋತಿರುವುದರಿಂದ ದಲಿತ, ಶೋಷಿತ, ಅಲಕ್ಷಿತ ಸಮುದಾಯಗಳಿಗೆ ಸಾಕಷ್ಟು ನಷ್ಟವಾಗಿದೆ.2013-18 ರ ವರೆಗೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಆಂಜನೇಯ ಅವರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎಸ್ಸಿ-ಎಸ್ಟಿ ಅನುದಾನ ಕಾಯ್ದೆ ಜಾರಿ, ಗುತ್ತಿಗೆಯಲ್ಲಿ ಎಸ್ಸಿ ಎಸ್ಪಿ ಸಮುದಾಯಗಳ ಗುತ್ತಿಗೆದಾರರಿಗೆ ಮೀಸಲಾತಿ ನೀಡುವ ಮೂಲಕ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ. ಅಷ್ಟೇ ಅಲ್ಲ ಇಡೀ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್ಸಿ-ಎಸ್ಟಿ, ಅಲೆಮಾರಿ, ಹಿಂದುಳಿದ ವರ್ಗಗಳ ಮಕ್ಕಳಿಗಾಗಿ ನೂರಾರು ಹೈಟೆಕ್ ಹಾಸ್ಟೆಲ್ ಹಾಗೂ ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಶಾಲೆ ಪ್ರಾರಂಭ ಮಾಡುವಲ್ಲಿ ಆಂಜನೇಯ ಅವರ ಪಾತ್ರ ದೊಡ್ಡದು, ಈ ಕಾರ್ಯಗಳ ಮೂಲಕ ಹಿಂದುಳಿದ, ದಲಿತ ಸಮುದಾಯಗಳಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದಾರೆ. ದಲಿತ ಸಮಾಜಕ್ಕೆ ಸಾಮಾಜಿಕನ್ಯಾಯ ನೀಡಬೇಕಾಗಿರುವುದರಿಂದ ಆಂಜನೇಯ ಅವರನ್ನು ಎಂ.ಎಲ್.ಸಿ.ಯನ್ನಾಗಿ ಮಾಡಿ ಮಂತ್ರಿ ಮಾಡಬೇಕೆಂದು ಪಕ್ಷದ ನಾಯಕರು,ಹಿರಿಯರಲ್ಲಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾದಿಗ ಸಂಘಟನೆಗಳ ಮುಖಂಡರಾದ ದಾಸಪ್ಪ, ಮಂಜುನಾಥ್, ವಸಂತ್ ಕುಮಾರ್, ರಾಜು, ಕಾಂತರಾಜ್ಇದ್ದರು.