ಕಡೂರು: ವಾಲ್ಮೀಕಿ ಸಮುದಾಯವನ್ನು ಅವಾಚ್ಯ ಪದಗಳಿಂದ ನಿಂದಿಸಿರುವ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ವಾಲ್ಮೀಕಿ ಸಮಾಜದ ತಾಲೂಕು ಮುಖಂಡರು ಗ್ರೇಡ್ 2ತಹಸೀಲ್ದಾರ್ ಅಶೋಕ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕೆಪಿಸಿಸಿ ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷೆ ನಾಗಮ್ಮ ಶಿವಕುಮಾರ್ ಮಾತನಾಡಿ, ರಮೇಶ್ ಕತ್ತಿ ಅವರು ಬೆಂಬಲಿಗರೊಂದಿಗೆ ಮಾತನಾಡುವಾಗ, ವಾಲ್ಮೀಕಿ ಸಮುದಾಯವನ್ನು ಕೀಳು ಪದದಲ್ಲಿ ನಿಂದಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ಗೊಂಡಿದೆ. ಇದು ವಾಲ್ಮೀಕಿ ಸಮುದಾಯದವರ ಮನಸ್ಸಿಗೆ ಘಾಸಿ ಉಂಟು ಮಾಡಿದೆ. ರಮೇಶ್ ಕತ್ತಿ ಅವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಪಟ್ಟಣ ಠಾಣೆಯಲ್ಲಿಯೂ ಜಾತಿ ನಿಂದನೆ ದೂರು ನೀಡಲಾಗಿದೆ ಎಂದರು. ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ರಮೇಶ್, ವಸಂತಮ್ಮ, ಚಂದನಾ ಪ್ರಭು, ಜಗದೀಶ್, ಮಂಜುನಾಥ್ ಇತರರಿದ್ದರು.