ಜಿಲ್ಲೆ

ಮಾಜಿ ಶಾಸಕರು ಬಿಜೆಪಿ ಸೇರಿದರೆ ಸ್ವಾಗತ : ಎಚ್​.ಸಿ.ಬಾಲಕೃಷ್ಣ ಅವರಿಗೆ ಎಂಎಲ್ಸಿ ಸಿಪಿವೈ ಬಹಿರಂಗ ಆಹ್ವಾನ

ಚನ್ನಪಟ್ಟಣ

ಮಾಗಡಿಯ ಮಾಜಿ ಶಾಸಕರು ಕಾಂಗ್ರೆಸ್​ ತೊರೆದು ಬಿಜೆಪಿ ಸೇರುವುದಾದರೆ ಸ್ವಾಗತಿಸುತ್ತೇವೆ. ಅವರಿಗೆ ಪಕ್ಷದಲ್ಲಿ ಒಳ್ಳೆಯ ಅವಕಾಶ ಇದೆ, ಅವರು ಮನಸ್ಸು ಮಾಡಬೇಕು ಎನ್ನುವ ಮೂಲಕ ಜಿಲ್ಲೆಯ ಪ್ರಮುಖ ಕಾಂಗ್ರೆಸ್​ ನಾಯಕ ಎಚ್​.ಸಿ. ಬಾಲಕೃಷ್ಣ ಅವರಿಗೆ ಮಾಜಿ ಸಚಿವ, ಮೇಲ್ಮನೆ ಸಚಿವ ಸಿ.ಪಿ.ಯೋಗೇಶ್ವರ್​ ಬಹಿರಂಗ ಆಹ್ವಾನ ನೀಡಿದರು.

ತಾಲೂಕಿನ ನೀಲಕಂಠನಹಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಕಾಂಗ್ರೆಸ್​ನಲ್ಲಿ ಗೊಂದಲದ ವಿಚಾರ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಬಾಲಕೃಷ್ಣ ಪತ್ರ ಬರೆದಿರುವ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಬಾಲಕೃಷ್ಣ ರಾಮನಗರ ಜಿಲ್ಲೆಯಲ್ಲಿ ಮೊದಲ ಬಿಜೆಪಿ ಶಾಸಕರಾಗಿದ್ದವರು. ಸಾಕಷ್ಟು ಹೋರಾಟಗಳ ಮೂಲಕ ಸಾಗಿ ಬಂದವರು. ನಾನೂ ಸಹ ಈ ಹಿಂದೆ ಹಲವು ಬಾರಿ ಅವರನ್ನು ಬಿಜೆಪಿಗೆ ಆಹ್ವಾನಿಸಿದ್ದೆ. ಆದರೆ, ಅವರು ಕಾಂಗ್ರೆಸ್​ನಲ್ಲೇ ಮುಂದುವರಿಯುತ್ತೇನೆ ಎಂದಿದ್ದರು. ಇದೀಗ, ಅವರು ಬಿಜೆಪಿಗೆ ಬರುವುದಾದರೆ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಅವರಿಗೆ ನಮ್ಮ ಪಕ್ಷದಲ್ಲಿ ಒಳ್ಳೆಯ ಭವಿಷ್ಯ ಇರುತ್ತದೆ. ಪಕ್ಷಕ್ಕೆ ಬರುವ ಬಗ್ಗೆ ಅವರು ಮನಸ್ಸು ಮಾಡಬೇಕು ಎಂದು ತಿಳಿಸಿದರು.

ಇನ್ನು ಕಾಂಗ್ರೆಸ್​ನಲ್ಲಿ ಸಿಎಂ ಕುರ್ಚಿಗಾಗಿ ಗದ್ದಲ,ಡಿ.ಕೆ. ಶಿವಕುಮಾರ್​ ಮತ್ತು ಸಿದ್ದರಾಮಯ್ಯ ನಡುವೆ ಭಿನ್ನರಾಗದ ಬಗ್ಗೆ ಪ್ರತಿಕ್ರಿಯಿಸಿದ ಯೋಗೇಶ್ವರ್​, ಅದು ಕಾಂಗ್ರೆಸ್​ನ ಆಂತರಿಕ ವಿಚಾರ. ಅದರ ಬಗ್ಗೆ ನಾನೇಕೆ ಪ್ರತಿಕ್ರಿಯಿಸಲಿ.ನಿನ್ನೆಯ ಡಿ.ಕೆ.ಶಿವಕುಮಾರ್​ ಹೇಳಿಕೆ ಗಮನಿಸಿದ್ದೇನೆ,ನಾನು ಪಕ್ಷಕ್ಕಾಗಿ ದುಡಿದೆ, ಆದರೆ ತೊಂದರೆಯಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯನವರು ಸಿಎಂ ಆಗಿದ್ದವರು, ಆ ಪಕ್ಷದಲ್ಲಿಇಬ್ಬರೂ ಪ್ರಬಲರಾಗಿದ್ದಾರೆ. ಮುಂದೆ ಕಾದು ನೋಡೋಣ ಎಂದರು.

ತಾಲೂಕಿನ ನೀಲಕಂಠನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಯಲ್ಲಮ್ಮ ಗುರುಮೂರ್ತಿ ದೇವಾಲಯ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿ.ಪಿ.ಯೋಗೇಶ್ವರ್​ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ದೇವಿಯ ಮೆರವಣಿಗೆಗೆ ತಂದಿದ್ದ ರಾಣಿಬೆನ್ನೂರಿನ ಹೊಳೆಮಠದ ಆನೆಯ ಆಶೀರ್ವಾದ ಪಡೆದರು.

ಬಿಜೆಪಿ ಮುಖಂಡರಾದ ತಗಚಗೆರೆ ಕುಳ್ಳಪ್ಪ, ಸಿ.ಪಿ.ನಾಗೇಶ್​, ಕಿರಣ್​ಕುಮಾರ್​, ಜಯಂತ್​ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.