ಯಳಂದೂರು: ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಪರ ಪುತ್ರ, ಪಕ್ಷದ ಯುವ ಮುಖಂಡ ವರ್ಧನ್ ಹಾಗೂ ಮತ್ತೊಬ್ಬ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಅವರ ಪುತ್ರ ಲೋಕೇಶ್ ಪಟ್ಟಣದಲ್ಲಿ ಮಂಗಳವಾರ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು.
ಕಾಂಗ್ರೆಸ್ ಯುವ ಮುಖಂಡ ವರ್ಧನ್ ಮಾತನಾಡಿ, ನಮ್ಮ ತಾತ ಹಾಗೂ ತಂದೆ ಮಂತ್ರಿಯಾಗಿ, ಶಾಸಕರಾಗಿ ಈ ಹಿಂದೆ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಅವರು ಕಳೆದ 2 ಬಾರಿ ಲೋಕಸಭಾ ಹಾಗೂ 4 ಬಾರಿ ವಿಧಾನಸಭಾ ಚುನಾವಣೆಗಳಲ್ಲಿ ಸೋತಿದ್ದಾರೆ. ಆದರೂ ಅವರ ಜನಪ್ರಿಯತೆ ಕ್ಷೇತ್ರದಲ್ಲಿ ಇನ್ನೂ ಮಾಸಿಲ್ಲ. ಈ ಹಿಂದೆ ಇವರು ಮಾಡಿರುವ ಅಭಿವೃದ್ಧಿ ಕೆಲಸಗಳು ಈಗ ಇವರಿಗೆ ಶ್ರೀರಕ್ಷೆಯಾಗಿವೆ. ಅಲ್ಲದೇ, ಕಾಂಗ್ರೆಸ್ ಈ ಬಾರಿಯೂ ಅವರಿಗೆ ಟಿಕೆಟ್ ನೀಡಿದೆ. ಅಲ್ಲದೆ ಪಕ್ಷದ ತತ್ವಸಿದ್ಧಾಂತಗಳು ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲ ವರ್ಗಗಳ ಬಡವರ ಉದ್ಧಾರವೇ ಆಗಿದೆ. ಈಗ ಬಿಡುಗಡೆ ಮಾಡಿರುವ ಪಕ್ಷದ ಪ್ರಣಾಳಿಕೆಗಳೂ ಬಡವರ ಪರವಾಗಿದೆ. ಹಾಗಾಗಿ ಪಕ್ಷದ ಅಭ್ಯರ್ಥಿಯಾದ ಎ.ಆರ್. ಕೃಷ್ಣಮೂರ್ತಿ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಪಟ್ಟಣದ 11 ವಾರ್ಡ್‌ಗಳಿಗೂ ಮನೆ ಮನೆಗಳಿಗೆ ತೆರಳಿ ಮತಯಾಚನೆ ಮಾಡಲಾಯಿತು. ಯಳಂದೂರು ಪಪಂ ಅಧ್ಯಕ್ಷ ಪ್ರಭಾವತಿ ರಾಜಶೇಖರ್, ಉಪಾಧ್ಯಕ್ಷೆ ಲಕ್ಷ್ಮೀ ಮಲ್ಲು, ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಮಹದೇವನಾಯಕ, ಕೆ. ಮಲ್ಲಯ್ಯ, ಮಂಜು, ಬಿ.ರವಿ, ಸುಶೀಲಾ ಪ್ರಕಾಶ್, ಶಾಂತಮ್ಮ ನಿಂಗರಾಜು ಮಾಜಿ ಸದಸ್ಯರಾದ ಜೆ. ಶ್ರೀನಿವಾಸ್, ಟಿಎಪಿಸಿಎಂಸಿ ಸದಸ್ಯ ಮಹೇಶ್, ಲಿಂಗರಾಮೂರ್ತಿ, ಪ್ರಮೋದ್, ಮುನವ್ವರ್ ಬೇಗ್, ಅಪ್ಸರ್‌ಖಾನ್, ರಿಜ್ವಾನ್ ಇತರರು ಇದ್ದರು.
ಯಳಂದೂರು ಪಟ್ಟಣದಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಪರ ಪಪಂ ಸದಸ್ಯರು ಯುವ ಮುಖಂಡರಾದ ವರ್ಧನ್ ಹಾಗೂ ಲೋಕೇಶ್ ಪ್ರಚಾರ ನಡೆಸಿದರು. ರಾಜಶೇಖರ್, ಲಕ್ಷ್ಮೀ ಮಲ್ಲು, ಮಹೇಶ್, ವೈ.ಜಿ. ರಂಗನಾಥ ಇತರರು ಇದ್ದರು.