ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಅವರು ತಂದ ಅನುದಾನ ಹಾಲಿ ಶಾಸಕ ಗಣೇಶ್ ಪ್ರಸಾದ್ ಅವರ ಗೌರವ ಕಾಪಾಡಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಡ್ನಾಕೂಡು ಪ್ರಕಾಶ್ ವ್ಯಂಗ್ಯವಾಡಿದರು.
ಶಾಸಕ ಗಣೇಶ್ ಪ್ರಸಾದ್ ಅವರು ಮಾಜಿ ಶಾಸಕ ನಿರಂಜನ್ ಕುಮಾರ್ ಅವರನ್ನು ದಲಿತ ವಿರೋಧಿ ಹಾಗೂ ಕ್ಷೇತ್ರದ ಅಭಿವೃದ್ಧಿ ಸಹಿಸದೆ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಹೇಳಿಕೆ ನೀಡಿರುವುದು ಸಮಂಜಸವಲ್ಲ. ಮಾಜಿ ಶಾಸಕ ನಿರಂಜನ್ ಕುಮಾರ್ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ತಂದಿದ್ದಾರೆ. ಈ ಅನುದಾನದಲ್ಲಿ ಪೂರ್ಣಗೊಂಡ ಭವನ ಮತ್ತು ಇನ್ನಿತರೆ ಕಾಮಗಾರಿಗಳನ್ನು ಶಾಸಕ ಗಣೇಶ್‌ಪ್ರಸಾದ್ ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ದೂರಿದರು.
ಮಾಜಿ ಶಾಸಕ ನಿರಂಜನ್‌ಕುಮಾರ್ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ರೂ, ಅನುದಾನ ತಂದಿದ್ದಾರೆ. ನಿಮ್ಮ ಪಕ್ಷದವರೇ ಆದ ಶಾಸಕ ಪುಟ್ಟರಂಗಶೆಟ್ಟಿ ರವರೇ ಮಾಧ್ಯಮದವರೊಂದಿಗೆ ಗುಂಡ್ಲುಪೇಟೆ ಕ್ಷೇತ್ರಕ್ಕೆ ಸರ್ಕಾರ ಕೋಡಿಗಟ್ಲೇ ಅನುದಾನ ನೀಡುತ್ತಿದೆ ಎಂದು ಹೇಳಿಕೆ ನೀಡಿರುವುದನ್ನು ನೀವು ಅರುತುಕೊಳ್ಳಬೇಕು. ಸುಮಾರು 200 ಕೋಟಿ ರೂ, ಗಿಂತಲೂ ಹೆಚ್ಚು ಅನುದಾನದಿಂದ ಎಸ್ಸಿ,ಎಸ್ಟಿ ಕಾಲೋನಿಗಳ ಅಭಿವೃದ್ಧಿ ಮಾಡಿದ್ದಾರೆ. ಅಂತವರನ್ನು ದಲಿತ ವಿರೋಧಿ ಎನ್ನುವುದು ಅತ್ಯಂತ ಖಂಡನೀಯ ಎಂದು ಕಿಡಿಕಾರಿದರು.
ಗುಂಡ್ಲುಪೇಟೆ ಕ್ಷೇತ್ರಕ್ಕೆ ಸರ್ಕಾರ ಸುಮಾರು 25 ಕೋಟಿ ರೂ, ವಿಶೇಷ ಅನುದಾನ ನೀಡಿದೆ ಎಂದು ಹೇಳಿದ್ದೀರಿ. ಯತೀಂದ್ರ ಸಿದ್ದರಾಮಯ್ಯನವರ ಆಪ್ತ ಗುತ್ತಿಗೆದಾರರು ಕೆಲಸ ಮಾಡುವ ದೃಷ್ಟಿಯಿಂದ ನಿಮ್ಮ ಕ್ಷೇತ್ರಕ್ಕೂ ಅನುದಾನ ತಂದಿದ್ದಾರೆ. ಇದು ಯತೀಂದ್ರ ಸಿದ್ದರಾಮಯ್ಯನವರ ಆಪ್ತಗುತ್ತಿಗೆದಾರರ ಸಾಧನೆ ಹೊರತು, ನಿಮ್ಮ ಸಾಧನೆಯಲ್ಲ. ದಲಿತಪರವಾದ ನೀವು ಇದರಲ್ಲಿ ದಲಿತ ಗುತ್ತಿಗೆದಾರರಿಗೆ ಎಷ್ಟು ಅನುದಾನ ಹಂಚಿದ್ದೀರಿ. ಕ್ಷೇತ್ರಕ್ಕೆ ಎಸ್ಸಿಪಿ,ಟಿಎಸ್ಪಿ ಯೋಜನೆಯಡಿ ಎಷ್ಟು ಅನುದಾನ ತಂದಿದ್ದೀರಿ ಲೆಕ್ಕಕೊಡಿ ಎಂದು ಸವಾಲು ಹಾಕಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರು ಮಹದೇವಸ್ವಾಮಿ, ಜಿಲ್ಲಾ ಮಾಧ್ಯಮ ವಕ್ತಾರ ಕಾಡಹಳ್ಳಿ ಕುಮಾರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮೂಡಳ್ಳಿ ಮೂರ್ತಿ, ಸಹ ವಕ್ತಾರ ರಾಮಸಮುದ್ರ ಶಿವಣ್ಣ ಹಾಜರಿದ್ದರು.