ಜಿಲ್ಲೆ

ಮಾಜಿ ಶಾಸಕ ಹರತಾಳು ಹಾಲಪ್ಪ ಆರೋಪ ಸುಳ್ಳು

ಸಾಗರ: ನಮ್ಮ ಕುಟುಂಬದ ವಿರುದ್ಧ ಮಾಜಿ ಶಾಸಕ ಹರತಾಳು ಹಾಲಪ್ಪ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಸೂಕ್ತ ಮಾಹಿತಿ ಇಲ್ಲದೆ ತಮ್ಮ ಹಿಂಬಾಲಕರ ಮಾತು ಕೇಳಿ ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪ್ರಗತಿಪರ ಕೃಷಿಕ ಹಮೀದ್ ಎ.ಎ. ಆವಿನಹಳ್ಳಿ ದೂರಿದರು.

ಹರತಾಳು ಹಾಲಪ್ಪ ನಮ್ಮ ವಿರುದ್ಧ ಇದೇ ರೀತಿ ದಾಖಲೆ ಇಲ್ಲದೆ ಸುಳ್ಳು ಆರೋಪ ಮಾಡಿದರೆ ಮಾನನಷ್ಟ ಮೊಕದ್ದಮೆ ಹೂಡುವುದು ಅನಿವಾರ್ಯವಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಸಾಗರ ತಾಲೂಕಿನ ಆವಿನಹಳ್ಳಿ ಗ್ರಾಮದ ಸರ್ವೇ ನಂ.60ಎ ಸ್ಥಳದಲ್ಲಿ ನನ್ನ ಪತ್ನಿ ಹೆಸರಿನಲ್ಲಿ 2.20 ಎಕರೆ ಜಮೀನು ಇದೆ. ಬಗರ್‌ಹುಕುಂ ಯೋಜನೆಯಡಿ 2016ರಲ್ಲಿ ಜಾಗ ಮಂಜೂರಾಗಿದ್ದು, ಇದಕ್ಕೆ ಸಂಬಂಧಿಸಿ ದಾಖಲೆ ನಮ್ಮ ಬಳಿ ಇದೆ. ಈ ಜಮೀನಿನಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿ ಕೇಶವ ಬಿನ್ ಸಣ್ಣಪ್ಪ ಎಂಬುವವರ ಜಮೀನು ಇದೆ. ಅವರು ನಮ್ಮ ಸ್ವಾಧೀನದಲ್ಲಿರುವ ಜಮೀನು ಒತ್ತುವರಿ ಮಾಡುವ ಪ್ರಯತ್ನ ನಡೆಸಿದ್ದಾರೆ. ನಾವು ಇದನ್ನು ಪ್ರಶ್ನಿಸಿದ್ದೇ ತಪ್ಪು ಎನ್ನುವಂತೆ ಕೆಲವರು ಮಾಜಿ ಸಚಿವ ಹರತಾಳು ಹಾಲಪ್ಪ ಬಳಿ ಸುಳ್ಳು ಮಾಹಿತಿ ನೀಡಿ ನಮ್ಮ ವಿರುದ್ಧ ಎತ್ತಿಕಟ್ಟಿದ್ದಾರೆ. ಹರತಾಳು ಹಾಲಪ್ಪ ಸರಿಯಾದ ಮಾಹಿತಿ ಇಲ್ಲದೆ ನಮ್ಮ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ನಾನು ಕಾನೂನಾತ್ಮಕವಾಗಿ ಸರಿ ಇದ್ದುದರಿಂದ ಹಾಲಿ ಶಾಸಕ ಗೋಪಾಲಕೃಷ್ಣ ಬೇಳೂರು ನನಗೆ ರಕ್ಷಣೆ ನೀಡಿದ್ದಾರೆ ಎಂದರು.

2004ರಲ್ಲಿ ಸಾಗರದಲ್ಲಿ ನಡೆದ ಕೋಮುಗಲಭೆ ಸಂದರ್ಭ ನಮ್ಮ ಮನೆ, ಬಟ್ಟೆ ಅಂಗಡಿ, ುಟ್‌ವೇರ್ ಅಂಗಡಿಗೆ ಬೆಂಕಿ ತಗುಲಿ ಕೋಟ್ಯಂತರ ರೂ. ನಷ್ಟ ಉಂಟಾಗಿತ್ತು. 2010ರಲ್ಲಿ ಗ್ರಾಹಕ ನ್ಯಾಯಾಲಯದಲ್ಲಿ ತೀರ್ಮಾನವಾಗಿ ನಮಗೆ ಕೇವಲ 14.76 ಲಕ್ಷ ರೂ. ಪರಿಹಾರ ಬಂದಿದೆ. ಆದರೆ ಹಾಲಪ್ಪನವರು ವಿಮೆ ಆಸೆಗೆ ನಾವೇ ಬೆಂಕಿ ಹಾಕಿದ್ದೇವೆ, ವಿಮೆ ಹಣಕ್ಕಾಗಿ ಅಲೆಯುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ದುಬೈನಲ್ಲಿ ವಾಸವಿದ್ದು, ನನ್ನ ಕುಟುಂಬ ಬೆಂಗಳೂರಿನಲ್ಲಿ ವಾಸವಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ನಾನು 1996ರಿಂದ ಆವಿನಹಳ್ಳಿಯಲ್ಲಿ ಕುಟುಂಬದ ಜತೆ ಇದ್ದೇನೆ. ಹಾಲಪ್ಪ ಯಾಕೆ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಹಿಂದೆ ಅವರ ಪರ ಚುನಾವಣೆ ಪ್ರಚಾರ ನಡೆಸಿ ಅವರ ಗೆಲುವಿಗೆ ಶ್ರಮಿಸಿದ್ದೇನೆ. ಇದೆಲ್ಲವನ್ನೂ ಮರೆತು ನನ್ನ ವಿರುದ್ಧ ಸೇಡಿನ ಕ್ರಮ ಏಕೆಂದು ಅವರೇ ತಿಳಿಸಬೇಕು ಎಂದು ಹೇಳಿದರು.

ಆವಿನಹಳ್ಳಿ ಗ್ರಾಪಂ ಸದಸ್ಯೆ ಸಫಿಯಾ ಅಬೂಬಕರ್, ಸ್ವಾಮಿ ಮತ್ತಿಕೊಪ್ಪ, ಶ್ರೀಕಾಂತ ಕುರುವರಿ, ಮಂಜು ಚಿಕ್ಕಮತ್ತೂರು, ಕಬೀರ್ ಸುದ್ದಿಗೋಷ್ಠಿಯಲ್ಲಿದ್ದರು.