ಜಿಲ್ಲೆ

ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ಇನ್ನಿಲ್ಲ

ವಿಜಯವಾಣಿ ಸುದ್ದಿಜಾಲ ಧಾರವಾಡ

ಕಾಂಗ್ರೆಸ್ ಮುಖಂಡ, ಸಮಾಜಮುಖಿ ಚಿಂತಕ ಹಾಗೂ ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ (64) ಸ್ವಗ್ರಾಮ ಅಳ್ನಾವರದಲ್ಲಿ ಗುರುವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಅಂತ್ಯಕ್ರಿಯೆಯನ್ನು ಅಳ್ನಾವರ ಪಟ್ಟಣದಲ್ಲಿ ಗುರುವಾರ ಸಂಜೆ ನೆರವೇರಿಸಲಾಯಿತು.
ಶಿವಾನಂದ ಅಂಬಡಗಟ್ಟಿ ಅವರದು ರಾಜಕೀಯ ಕುಟುಂಬ. ಹಿರಿಯ ಸಹೋದರ ಶ್ರೀಕಾಂತ ಅಂಬಡಗಟ್ಟಿ 1994ರಲ್ಲಿ ಅಂದಿನ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದರು. ಅವರ ಅಕಾಲಿನ ನಿಧನದ ನಂತರ 1998ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಶಶಿಧರ ಅಂಬಡಗಟ್ಟಿ ಶಾಸಕರಾಗಿದ್ದರು. 1999ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಶಿವಾನಂದ ಅಂಬಡಗಟ್ಟಿ ಶಾಸಕರಾಗಿದ್ದರು. 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಪಕ್ಷೇತರ ಅಭ್ಯರ್ಥಿ ವಿನಯ ಕುಲಕರ್ಣಿ ವಿರುದ್ಧ ಸೋಲನುಭವಿಸಿದ್ದರು. 2008ರಲ್ಲಿ ಗ್ರಾಮೀಣ ಕ್ಷೇತ್ರ ಪುನರ್ ವಿಂಗಡಣೆಯಾದಾಗ ಅಳ್ನಾವರ, ಕಲಘಟಗಿ ಕ್ಷೇತ್ರ ವ್ಯಾಪ್ತಿಗೊಳಪಟ್ಟಿತ್ತು. ಆ ಸಂದರ್ಭದಲ್ಲಿ ಕಲಘಟಗಿಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಶಿವಾನಂದ, ಸಂತೋಷ ಲಾಡ್ ವಿರುದ್ಧ ಸೋಲನುಭವಿಸಿದ್ದರು. ನಂತರ ಕೆಲವರ್ಷ ಬಿಜೆಪಿ, ಬಳಿಕ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದರು.
ಕಳೆದ ವರ್ಷ ಮಾಜಿ ಸಚಿವ ವಿನಯ ಕುಲಕರ್ಣಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಪ್ರಸ್ತುತ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು.