ಜಿಲ್ಲೆ

ಮಾಜಿ ಶಾಸಕ ಪ್ರೀತಂ ಗೌಡ ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಾರೆ:ಎಚ್.ಯೋಗಾರಮೇಶ್

ಹಾಸನ: ಮಾಜಿ ಶಾಸಕ ಪ್ರೀತಂ ಗೌಡ ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುದ್ದು,ಅವರಿಗೆ ಹೈಕಮಾಂಡ್ ಮೈಸೂರು ಮತ್ತು ಚಾಮರಾಜನಗರದ ಜವಾಬ್ದಾರಿ ನೀಡಿರುವುದರಿಂದ ಜಿಲ್ಲೆಗೆ ಬರಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲೂ ಎನ್‌ಡಿಎ ಅಭ್ಯರ್ಥಿ ಪರ ಕೆಲಸ ಮಾಡುತ್ತಾರೆ ಎಂದು ಬಿಜೆಪಿ ಮುಖಂಡ ಎಚ್.ಯೋಗಾರಮೇಶ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಅಶೋಕ ಹೋಟೆಲ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರೀತಂ ಅವರ ರಾಜಕೀಯ ಬೆಳವಣಿಗೆ ಸಹಿಸಲಾಗದೆ ಕೆಲವರು ಊಹಾಪೋಹ ಸೃಷ್ಟಿಸುತ್ತಿದ್ದಾರೆ. ತಮ್ಮ ಕಾರ್ಯಕರ್ತರಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಸೂಚಿಸಿದ್ದಾರೆ, ಪ್ರಜ್ವಲ್ ವಿರೋಧಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಶುದ್ಧ ಸುಳ್ಳು. ಮಾತೃಪಕ್ಷಕ್ಕೆ ದ್ರೋಹ ಬಗೆಯುವುರಾಗಿದ್ದರೆ ಅವರಿಗ್ಯಾಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗುತ್ತಿತ್ತು ಎಂದು ಪ್ರಶ್ನಿಸಿದರು.
ಜಿಲ್ಲಾ ಜೆಡಿಎಸ್ ನಾಯಕರು 25 ವರ್ಷಗಳ ರಾಜಕೀಯ ಬದ್ದವೈರಿ ಅರಕಲಗೂಡು ಶಾಸಕ ಎ.ಮಂಜು ಅವರನ್ನೇ ಒಪ್ಪಿಕೊಂಡಿರುವಾಗ ಇತ್ತೀಚೆಗಿನ ವೈರಿ ಪ್ರೀತಂ ಗೌಡ ಅವರನ್ನು ಒಪ್ಪದೇ ಇರುತ್ತಾರೆಯೇ ಎಂದು ಎಂದು ಹೇಳಿದರು.
ಪ್ರೀತಮ್ ಗೌಡ ಅವರು ಅಭಿವೃದ್ಧಿ ಕಾಮಗಾರಿ ಜೊತೆಗೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಅವರು ಸ್ವಾರ್ಥಿಯಾಗಿದ್ದರೆ ಸಕಲೇಶಪುರದ ಸಿಮೆಂಟ್ ಮಂಜು ಅವರ ಗೆಲುವಿಗೆ ಶ್ರಮಿಸುತ್ತಿರಲಿಲ್ಲ. ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗಿಂತ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಪ್ರೀತಂ ಮಾಡಿದ್ದಾರೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಿಂದ ದೂರ ಇದ್ದಾರೆ ಎಂಬ ಕಾರಣಕ್ಕೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಒಳಒಪ್ಪಂದದಿಂದ ಪ್ರೀತಮ್ ಸೋಲಬೇಕಾಯಿತು. 2018ರ ಚುನಾವಣೆಯಲ್ಲಿ 38 ಸಾವಿರ ಮತ ಪಡೆದಿದ್ದ ಕಾಂಗ್ರೆಸ್ 2023ರಲ್ಲಿ 4 ಸಾವಿರ ಮತ ಪಡೆದಿದ್ದು ಏಕೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‌ನ ವ್ಯವಸ್ಥಿತ ಪಿತೂರಿಗೆ ಪ್ರೀತಮ್ ಬಲಿಯಾಗಿದ್ದಾರೆ ಎಂದರು.
ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆನ್ನುವುದು ನಮ್ಮೆಲ್ಲರ ಉದ್ದೇಶ. ಆ ಕಾರಣಕ್ಕಾಗಿಯೇ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಪರ ಕೆಲಸ ಮಾಡುತ್ತಿದ್ದೇವೆ. ಪ್ರಜ್ವಲ್ ರೇವಣ್ಣ ಅವರು ಪ್ರೀತಮ್ ಅವರ ರಾಜಕೀಯ ವಿರೋಧಿಗಳ ಮನೆಗೆ ಭೇಟಿ ನೀಡುತ್ತಿರುವುದು ಎಲ್ಲರಿಗೂ ನೋವುಂಟು ಮಾಡಿದೆ. ಈ ವಿಚಾರವನ್ನು ಸಮನ್ವಯ ಸಭೆಯಲ್ಲಿ ಎಲ್ಲರ ಗಮನಕ್ಕೆ ತಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಪರ್ವ ಸರ್ವೇ ಸಾಮಾನ್ಯ. ಆರಂಭದಿಂದಲೂ ಜೆಡಿಎಸ್‌ನಲ್ಲೇ ಇದ್ದ ಕೆ.ಎಂ.ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ ಬೇರೆ ಪಕ್ಷಕ್ಕೆ ಸೇರಿದ್ದಾರೆ. ಅವರ ಈ ನಡವಳಿಕೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವೇ. ಪ್ರೀತಂ ಬಳಗದಲ್ಲಿ ಗುರುತಿಸಿಕೊಂಡಿದ್ದ ಉದ್ದೂರು ಪುರುಷೋತ್ತಮ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಕ್ಕೂ ಪ್ರೀತಮ್ ಅವರನ್ನೇ ಹೊಣೆಗಾರರನ್ನಾಗಿಸುವುದು ಯಾವ ನ್ಯಾಯ. ಬಿಜೆಪಿಯ ತತ್ವ ಸಿದ್ಧಾಂತಗಳ ಮೇಲೆ ನಂಬಿಕೆ ಇರುವುವವರು ಪಕ್ಷ ಬಿಟ್ಟು ಹೋಗುವುದಿಲ್ಲ. ಯಾವುದಾದರು ಲಾಭದ ನಿರೀಕ್ಷೆಯಿಂದ ರಾಜಕೀಯಕ್ಕೆ ಬರುವವರು ಈ ರೀತಿಯ ಕೆಲಸ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.