ಜಿಲ್ಲೆ

ಮಾಜಿ ಶಾಸಕ ಪ್ರಕಾಶ್ ಗೋಮಾತೆ ಪ್ರತಿರೂಪ: ಶ್ರೀ ಶಂಭುನಾಥ ಸ್ವಾಮೀಜಿ

Hassan - Mohan Kanthur

ಹಾಸನ: ಸೌಮ್ಯ ಸ್ವಭಾವದ ಮೂಲಕವೇ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ ಜನಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಮಾಜಿ ಶಾಸಕ ದಿ. ಎಚ್.ಎಸ್. ಪ್ರಕಾಶ್ ಅವರು ಗೋಮಾತೆಯ ಪ್ರತಿರೂಪ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಬಣ್ಣಿಸಿದರು.
ಹಾಸನ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್, ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಜಿ ಶಾಸಕ ದಿ. ಎಚ್.ಎಸ್. ಪ್ರಕಾಶ್ ಸ್ಮರಣಾರ್ಥ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿಗೆ ಶುಕ್ರವಾರ ಸಂಜೆ ಚಾಲನೆ ನೀಡಿ ಮಾತನಾಡಿದ ಅವರು, ಆದಿಚುಂಚನಗಿರಿ ಮಠದ ಸದ್ಭಕ್ತರ ಪೈಕಿ ಒಬ್ಬರಾಗಿದ್ದ ದಿ. ಎಚ್.ಎಸ್. ಪ್ರಕಾಶ್ ಅವರು ಕ್ರೀಡೆಗಳಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಅವರು ಶಾಸಕರಾಗಿದ್ದ ಅವಧಿಯಲ್ಲಿ ಅನೇಕ ಕ್ರೀಡಾ ಚಟುವಟಿಕೆಗಳನ್ನು ನಡೆಸುವುದರ ಜತೆಗೆ ಅಪರ ಜನಸೇವೆ ಮೂಲಕವೇ ಜನ ಮನ್ನಣೆ ಗಳಿಸಿದ್ದರು. ಮಾಡಿರುವ ಒಳ್ಳೆಯ ಕೆಲಸಗಳು ಇಂದಿಗೂ ಜೀವಂತವಾಗಿವೆ ಎಂದರು.
ಉತ್ತಮ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಪ್ರಕಾಶ್ ಜನಾನುರಾಗಿಯಾಗಿ ಅಪಾರ ಜನಸೇವೆ ಮಾಡಿದ್ದಾರೆ. ಅವರ ಸ್ಮರಣಾರ್ಥವಾಗಿ ಈ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ. ಸೋಲನ್ನು ಹೃದಯಕ್ಕೆ ಗೆಲುವನ್ನು ತಲೆಗೆ ಎಂದಿಗೂ ತಂದುಕೊಳ್ಳಬಾರದು. ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಸೋತವರು ಮುಂದಿನ ದಿನಗಳಲ್ಲಿ ಗೆಲ್ಲುವ, ಗೆದ್ದವರು ದೊಡ್ಡ ಗುರಿಯ ನಿಲುವನ್ನು ಹೊಂದುವ ಮೂಲಕ ಕ್ರೀಡಾಕೂಟ ಯಶಸ್ವಿಗೊಳಿಸಬೇಕು ಎಂದು ಸಲಹೆ ನೀಡಿದರು.
ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ನಮ್ಮ ತಂದೆಯವರು ಕ್ರೀಡಾಕೂಟದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಅವರ ಸಹಪಾಠಿಗಳು, ಬೆಂಬಲಿಗರು ಹಾಗೂ ಅಭಿಮಾನಿಗಳು ಅರ್ಥಪೂರ್ಣವಾಗಿ ಒಂದು ಕಾರ್ಯಕ್ರಮ ಮಾಡಬೇಕು ಎಂದು ಯೋಚಿಸಿ ಈ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದರು.
ಫುಟ್ಬಾಲ್ ಪಂದ್ಯಾವಳಿಗೆ ಬೇರೆ ಬೇರೆ ಜಿಲ್ಲೆಗಳಿಂದ ಕ್ರೀಡಾಪಟುಗಳು ಆಗಮಿಸಿದ್ದು, ಮೂರು ದಿನಗಳ ಫುಟ್ಬಾಲ್ ಕ್ರೀಡಾಕೂಟ ನಡೆಯಲಿದೆ. ಆಗಮಿಸಿರುವ 32 ತಂಡಗಳಿಗೂ ಈ ಮೂಲಕ ಶುಭಾಷಯ ಕೋರುತ್ತಾ. ಮುಂದಿನ ದಿನಗಳಲ್ಲಿ ಕ್ರೀಡೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇನ್ನಷ್ಟು ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಚಂದ್ರೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ರಘು ಗೌಡ, ಜೆಡಿಎಸ್ ವಕ್ತಾರ ಹೊಂಗೆರೆ ರಘು ಇತರರು ಇದ್ದರು.