ಜಿಲ್ಲೆ

ಮಾಜಿ ಶಾಸಕ, ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ನಿಧನ

ಚಾಮರಾಜನಗರ: ಕೊಳ್ಳೇಗಾಲ ಮಾಜಿ ಶಾಸಕ, ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಅನಾರೋಗ್ಯದಿಂದ ನಿಧನರಾದರು.

ಕೊಳ್ಳೇಗಾಲ ಪಟ್ಟಣದ ಮನೆಯಿಂದ ಮೈಸೂರಿನ ಆಸ್ಪತ್ರೆಗೆ ಮಂಗಳವಾರ ಬೆಳಗ್ಗೆ ಹೋಗುವಾಗ ಉತ್ತಂಬಳ್ಳಿ ಸಮೀಪ ಹೃದಯಾಘಾತವಾಗಿದೆ. ತಕ್ಷಣ ಇವರನ್ನು ಕೊಳ್ಳೇಗಾಲದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಅಷ್ಟರಲ್ಲಿ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಜಯಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದರು. ಡಿ.7 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಿಎಂ ಸಿದ್ದರಾಮಯ್ಯ ಇವರ ಮನೆಗೆ ಭೇಟಿ ನೀಡಿದ್ದರು. ಕೊಳ್ಳೇಗಾಲ ಪಟ್ಟಣದಲ್ಲಿ ನಿರ್ಮಾಣ ಮಾಡಿದ್ದ ಹೊಸ ಮನೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದರು.

ಅನಾರೋಗ್ಯ ಬಾಧಿಸುತ್ತಿದ್ದರೂ ಸುಮ್ಮನೆ ಕೂರದ ಜಯಣ್ಣ ಕ್ಷೇತ್ರದ ಜನರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದರು. ಇತ್ತೀಚೆಗೆ ಜಿಲ್ಲೆಯ ರಾಜಕೀಯ ಮುತ್ಸದ್ಧಿಗಳಲ್ಲಿ ಆರ್.ಧ್ರುವನಾರಾಯಣ್, ನಂತರ ವಿ.ಶ್ರೀನಿವಾಸಪ್ರಸಾದ್ ನಿಧನ ಮುಖಂಡರು, ಕಾರ್ಯಕರ್ತರಲ್ಲಿ ಅಪಾರ ನೋವನ್ನುಂಟು ಮಾಡಿತ್ತು. ಇದೀಗ ಜನಾನುರಾಗಿಯಾಗಿದ್ದ ಎಸ್.ಜಯಣ್ಣ ಅವರ ಸಾವು ಮತ್ತಷ್ಟು ದುಃಖವನ್ನುಂಟು ಮಾಡಿದೆ.