ಹೊಳೆನರಸೀಪುರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೇಶಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ ಎಂದು ಪುರಸಭೆ ಅಧ್ಯಕ್ಷ ಎಚ್.ಕೆ.ಪ್ರಸನ್ನ ಕುಮಾರ್ ಹೇಳಿದರು.
ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರ 93ನೇ ಜನ್ಮದಿನದ ಅಂಗವಾಗಿ ಭಾನುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಜೆಡಿಎಸ್ ಘಟಕ ಮತ್ತು ಪುರಸಭೆ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ಒಳ ಮತ್ತು ಹೊರ ರೋಗಿಗಳಿಗೆ ಹಣ್ಣು, ಬ್ರೆಡ್ ಹಂಚಿ ಮಾತನಾಡಿದರು.
ಪ್ರಧಾನಿಯಾಗಿ ದೆಹಲಿಯ ಕೆಂಪು ಕೋಟೆಯ ಮೇಲೆ ಭಾರತದ ತ್ರಿವರ್ಣ ಧ್ವಜಾರೋಹಣವನ್ನು ಹಾರಿಸಿದ ಏಕೈಕ ಕನ್ನಡಿಗ ಎಚ್.ಡಿ.ದೇವೇಗೌಡ. ಆರು ದಶಕಗಳಿಗೂ ಹೆಚ್ಚು ಕಾಲ ನಿರಂತರವಾಗಿ ಕರ್ನಾಟಕದ ನೆಲ, ಜಲಕ್ಕೆ ಸಂಬಂಧಿಸಿದಂತೆ ಹೋರಾಡಿದವರು. ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ದೇಶದ ಆಡಳಿತ ನಡೆಸಿದ ದೇವೇಗೌಡ ದೇಶದ ಮತ್ತು ರಾಜ್ಯದ ಸರ್ವತೋಮುಖ ಪ್ರಗತಿ ಮತ್ತು ಅಭಿವೃದ್ಧಿಗೆ ಶ್ರಮಿಸಿರುವ ಧೀಮಂತ ನಾಯಕ. ಅವರ ಹುಟ್ಟು ಹಬ್ಬವನ್ನು ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಬ್ರೆಡ್ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಮಗೆಲ್ಲ ಸ್ಫೂರ್ತಿ. ಅವರ ಆದರ್ಶಮಯ ಜೀವನ ನಮಗೆ ದಾರಿದೀಪ. ದೇವೇಗೌಡರಿಗೆ ಭಗವಂತನು ಆಯಸ್ಸು, ಆರೋಗ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಹಾರೈಸಿದರು.
ಡಾ.ರಮೇಶ್, ಡಾ.ದಿನೇಶ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಶ್ರೀಧರ್, ಎಚ್.ಎಸ್. ಸುದರ್ಶನ್, ಪುರಸಭೆ ಸದಸ್ಯರಾದ ಎ.ಜಗನ್ನಾಥ್, ವಾಸಿಂ, ಎಚ್.ಟಿ.ಕುಮಾರಸ್ವಾಮಿ, ಎಚ್.ಡಿ.ಉಮೇಶ್, ಡಿಶ್ ಗೋವಿಂದ, ಪೂಜೆ ಕೊಪ್ಪಲು ಆನಂದ್, ಸಮಾಜ ಸೇವಕ ಜಯಪ್ರಕಾಶ್, ಗ್ರಾಪಂ ಸದಸ್ಯರಾದ ದಿನೇಶ್ ನಾಗಲಾಪುರ, ಬಾಬು, ಮಲ್ಲೇಶ್, ಗಿರೀಶ್ ಇದ್ದರು.
ಎಚ್.ಡಿ.ದೇವೇಗೌಡರು ದೇಶ ಕಂಡಂತಹ ಅಪ್ರತಿಮ ಹೋರಾಟಗಾರರು. ರೈತರ ಮಗನಾಗಿ ಹುಟ್ಟಿ ಪ್ರಧಾನಿ ಸ್ಥಾನ ಅಲಂಕರಿಸಿ ಈಗಲೂ ಮಣ್ಣಿನ ಮಗನಾಗಿ ರೈತರ ಒಳಿತಿಗಾಗಿ ಚಿಂತಿಸುವ ರಾಜಕಾರಣಿಯಾಗಿದ್ದಾರೆ. ಅವರಿಗೆ ದೇವರು ಆರೋಗ್ಯ, ಆಯಸ್ಸು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಎಚ್.ಕೆ. ಪ್ರಸನ್ನ ಕುಮಾರ್, ಅಧ್ಯಕ್ಷ, ಪುರಸಭೆ ಹೊಳೆನರಸೀಪುರ