ವಿಜಯಪುರ: ಒಂದು ಉಪಚುನಾವಣೆಯಿಂದ ಒಂದು ರಾಜಕೀಯ ಪಕ್ಷದ ಅಸ್ತಿತ್ವದ ಬಗ್ಗೆ ತೀರ್ಮಾನಿಸಲು ಸಾಧ್ಯವಿಲ್ಲ. ಹೀಗಾಗಿ ಈ ಉಪ ಚುನಾವಣೆ ಮುಂದಿನ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಎನ್ನಲು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪ್ರತಿಕ್ರಿಯಿಸಿದರು.
ಇಂದಿರಾಗಾಂಧಿ ಪ್ರಧಾನ ಮಂತ್ರಿ ಆಗಿದ್ದಾಗ ತಮಿಳು ನಾಡಿನ ಉಪ ಚುನಾವಣೆಯೊಂದರಲ್ಲಿ ಕಾಂಗ್ರೆಸ್ ನ ಡಿಪಾಸಿಟ್ ಜಪ್ತಿ ಆಯಿತು. ಹೀಗಾಗಿ ಒಂದು ಉಪಚುನಾವಣೆಯಿಂದ ಪಕ್ಷ ಉಳಿಯುತ್ತೆ, ಉಳಿಯಲ್ಲ ಎಂಬುದು ನಿರ್ಧರಿಸಲು ಆಗಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.
ನಾನು ರಾಜಕೀಯ
ಕೊನೇ ಘಟ್ಟದಲ್ಲಿದ್ದರೂ ಸಿಂದಗಿ ಉಪ ಚುನಾವಣೆಯಲ್ಲಿ ಪ್ರಚಾರ ಮಾಡುತ್ತೇನೆ. ಅ. 28 ಸಂಜೆ 5 ಗಂಟೆವರೆಗೆ ಸಿಂದಗಿಯಲ್ಲೇ ಇದ್ದು ಹಳ್ಳಿ ಹಳ್ಳಿ ಸುತ್ತಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ. ಮಾತ್ರವಲ್ಲ ನಾನೀಗ ರಾಜಕೀಯ ಅಂತಿಮ ಘಟ್ಟದಲ್ಲಿದ್ದೇನೆ.
ಮುಂದಿನ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯ ಸುತ್ತಾಡಿ ಏಕಾಂಗಿಯಾಗಿ ಹೋರಾಡುವೆ ಎಂದರು.
ಯಾವುದೇ ಪಕ್ಷದೊಂದಿಗೆ ಜೆಡಿಎಸ್ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲ್ಲ. ರಾಜಕೀಯದಲ್ಲಿ ನಾಳೆ ಏನಾಗುತ್ತದೋ ಗೊತ್ತಿಲ್ಲ. ಯಾರು ನಮ್ಮ ಜೊತೆ ಇರುತ್ತಾರೆ ಯಾರು ನಮ್ಮನ್ನು ಬಿಟ್ಟು ಹೋಗುತ್ತಾರೋ ಎಂಬುದು ಗೊತ್ತಿಲ್ಲ. ಹೀಗಾಗಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದರು.
ನರೇಂದ್ರ ಮೋದಿ ಸಮರ್ಥನಾಯಕ ಎಂದು ಆಯ್ಕೆ ಮಾಡಲಾಯಿತು. ಆದರೆ ಇಂದು ದೇಶದಲ್ಲಿ ಏನು ನಡೆಯುತ್ತಿದೆ? ಪೆಟ್ರೋಲ್, ಡಿಸೇಲ್ ಬೆಲೆ ಏನಾಗಿದೆ? ಕಾಶ್ಮೀರದಲ್ಲಿ ಏನಾಗುತ್ತಿದೆ? ಎಂದು ಪ್ರಶ್ನಿಸಿದರು.
ಅಭ್ಯರ್ಥಿ ಆಯ್ಕೆ ಸರಿಯಾಗಿದೆ:
ಏಳು ದಿನ ಕಾರ್ಯಾಗಾರ ಮಾಡಲಾಗಿದೆ. ಯುವಕರು, ಅಲ್ಪಸಂಖ್ಯಾತರು, ಮಹಿಳೆಯರು ಹೀಗೆ ಹಲವು ಹಂತದಲ್ಲಿ ಕಾರ್ಯಾಗಾರ ನಡೆಸಲಾಗಿದೆ. ಸಾಕಷ್ಟು ಚರ್ಚೆ ಮಾಡಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ ಎಂದರು.
ನನ್ನ ಸಹಪಾಠಿಯಾಗಿ ಈ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿದ ಹಾಗೂ ಅಭಿವೃದ್ಧಿ ಗೆ ಸಹಕರಿಸಿದ ಶಕೀಲ ಅಂಗಡಿ ಮನೆತನಕ್ಕೆ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರದ ಅಭಿವೃದ್ಧಿ ಗೆ ಅಳಿಲು ಸೇವೆ ಸಲ್ಲಿಸಿದ್ದೇನೆ. ಈ ಕ್ಷೇತ್ರ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ. ಒಂಬತ್ತು ಜನ ಟಿಕೆಟ್ ಕೇಳಿದ್ದರು. ನಾನು ಮತ್ತು ಕುಮಾರಸ್ವಾಮಿ ಹಾಗೂ ಪಕ್ಷದ ಮುಖಂಡರು ಎರಡು ದಿನ ಚರ್ಚಿಸಿ ಎಲ್ಲರ ಒಮ್ಮತದ ಅಭಿಪ್ರಾಯದ
ಮೇರೆಗೆ ನಾಜಿಯಾ ಅಂಗಡಿ ಅವರನ್ನು ನೇಮಕ ಮಾಡಲಾಗಿದೆ ಎಂದರು.
ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಈಗಾಗಲೇ ಸಿಂದಗಿ ಕ್ಷೇತ್ರದ ಎಲ್ಲ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ. ಈ ಕ್ಷೇತ್ರ ನನ್ನ ರಾಜಕೀಯ ಜೀವನದಲ್ಲಿ ಮರೆಯಲಾಗದು.
ಅನೇಕ ಜನ ಹಿರಿಯರು ನಮ್ಮೊಂದಿಗೆ ಇದ್ದಾರೆ. ನಮ್ಮ ಯೋಜನೆಗಳನ್ನು ಜನರಿಗೆ ತಿಳಿಸುವೆ. ಎಲ್ಲ ಹಳ್ಳಿಗಳು ನನಗೆ ಗೊತ್ತಿವೆ. ಎಲ್ಲರನ್ನೂ ಭೇಟಿ ಮಾಡಿ ನನ್ನ ರಾಜಕೀಯ ಜೀವನದಲ್ಲಿ ಕೊನೇದಾಗಿ ಬಂದಿದ್ದೇನೆ. ಅಭಿವೃದ್ಧಿ ಗಾಗಿ ಬಂದಿದ್ದೇನೆ. ನಮ್ಮ ಅಭ್ಯರ್ಥಿಗೆ ಗೆಲ್ಲಿಸಿ ಎಂದು ಮನವಿ ಮಾಡುವೆ. ಕುಮಾರಸ್ವಾಮಿ ಕೂಡ ಬರ್ತಾರೆ. ಅವರು ಸಿಂದಗಿ ಮತ್ತು ಹಾನಗಲ್ಲ ಎರಡೂ ಕಡೆ ಸಂಚರಿಸುತ್ತಾರೆ. ನಮ್ಮ ಶಕ್ತಿ ಮೀರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವೆ. ಬೇರೆಯವರ ಮೇಲೆ ಆಪಾದನೆ ಕೊಡದೆ ಚುನಾವಣೆ ಎದುರಿಸುತ್ತೇವೆ ಎಂದರು.
ಶಾಸಕ ಡಾ.ದೇವಾನಂದ ಚವ್ಹಾಣ್,
ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ, ಬಂಡೆಪ್ಪ ಕಾಶಂಪುರ, ಡಾ.ಸುನಿತಾ ಚವ್ಹಾಣ್, ರಾಜುಗೌಡ ಪಾಟೀಲ ಕುದರಿಸಾಲೋಡಗಿ, ಮಾಜಿ ಶಾಸಕ ಬಿ.ಜಿ. ಪಾಟೀಲ, ರಾಜುಗೌಡ ಪಾಟೀಲ ಕುದರಿಸಾಲೋಡಗಿ,
ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮತ್ತಿತರರಿದ್ದರು.