ಬೆಂಗಳೂರು ಗ್ರಾಮಾಂತರ: ಸತತ ಎರಡು ವರ್ಷದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಶುಕ್ರವಾರ ಹೊಸಕೋಟೆಯಲ್ಲಿ ಮುಖಾಮುಖಿಯಾಗಿದ್ದಲ್ಲದೆ ಒಟ್ಟಿಗೆ ಕುಳಿತು ಭೋಜನ ಸವಿದ ದೃಶ್ಯ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಮಾಜಿ ಗುರು-ಶಿಷ್ಯರ ಸಮಾಗಮ ಕೆಲಕಾಲ ಹೈವೋಲ್ಟೆಜ್ ವಾತಾವರಣ ಸೃಷ್ಟಿಸಿತ್ತು.
ಒಂದು ಕಾಲದಲ್ಲಿ ಗುರು-ಶಿಷ್ಯರಂತಿದ್ದ ಸಿದ್ದು ಹಾಗೂ ಎಂಟಿಬಿ ಸಮಾಗಮಕ್ಕೆ ಹೊಸಕೋಟೆಯಲ್ಲಿನ ಕಾಂಗ್ರೆಸ್ ಮುಖಂಡರೊಬ್ಬರ ಮನೆ ವೇದಿಕೆ ಕಲ್ಪಿಸಿಕೊಟ್ಟಿತ್ತು. ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಎಂಟಿಬಿ ನಾಗರಾಜ್ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಬಾಗಿಲು ತಟ್ಟಿದ್ದರು. ಆಗಿನಿಂದ ಒಬ್ಬರು ಮತ್ತೊಬ್ಬರ ವಿರುದ್ಧ ಆರೋಪ ಪ್ರತ್ಯಾರೋಪ ಮಾಡುತ್ತಲೇ ಬಂದಿದ್ದರು. ಆದರೆ ಶುಕ್ರವಾರ ಎಲ್ಲ ರಾಜಕೀಯ ವೈಷಮ್ಯ ಮರೆತು ಸಹ ಭೋಜನ ಮಾಡಿ ಉಭಯಕುಶಲೋಪರಿಯೊಂದಿಗೆ ಮರಳಿದರು. ರಾಜಕೀಯ ಚುನಾವಣೆಗೆ ಸೀಮಿತ ಎಂಬ ಮಾತಿಗೆ ಈ ದೃಶ್ಯ ಪುಷ್ಟಿ ನೀಡುವಂತಿತ್ತು.
ಕಾಂಗ್ರೆಸ್ ಮುಖಂಡರ ಆತಿಥ್ಯ: ಕನಕ ಸಮೃದ್ಧಿ ಕ್ರೆಡಿಟ್ ಕೊ- ಆಪರೇಟಿವ್ ಸೊಸೈಟಿ ಉದ್ಘಾಟನೆಗೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಹೊಸಕೋಟೆಯ ಮುಖಂಡ ಮುನಿಸ್ವಾಮಿ ಎಂಬುವವರು ಮಧ್ಯಾಹ್ನದ ಭೋಜನಕ್ಕೆ ಆಹ್ವಾನಿಸಿದ್ದರು. ಇದೇ ವೇಳೆ ಸಚಿವ ಎಂಟಿಬಿ ನಾಗರಾಜ್ ಅವರನ್ನೂ ಆಹ್ವಾನಿಸಲಾಗಿತ್ತು ಎನ್ನಲಾಗಿದೆ.
ಮುಗಿಲುಮುಟ್ಟಿದ ಜಯೋಷ: ದೊಡ್ಡ ಮಟ್ಟದಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಹಾಗೂ ಎಂಟಿಬಿ ಪರ ಜಯೋಷ ಕೂಗಿದರು. ಸಿದ್ದರಾಮಯ್ಯ ಹಾಗೂ ಎಂಟಿಬಿ ಸ್ವಾಗತಕ್ಕೆ ಎರಡೂ ಪಕ್ಷದ ಕಾರ್ಯಕರ್ತರು ಮುಗಿಬಿದ್ದರು. ಈ ವೇಳೆ ತಳ್ಳಾಟ ನೂಕಾಟವೂ ನಡೆಯಿತು. ಸಿದ್ದರಾಮಯ್ಯ ಹಾಗೂ ಎಂಟಿಬಿ ಜತೆಗೆ ಸೆಲ್ಪಿ ತೆಗೆದುಕೊಳ್ಳಲು ಮುಗಿಬಿದ್ದರಿಂದ ಪರಿಸ್ಥಿತಿಯನ್ನು ತಹಬಂದಿಗೆ ತರಲು ಪೊಲೀಸರು ಹರಸಾಹಸ ನಡೆಸಬೇಕಾಯಿತು.
ಹೊಸಕೋಟೆಯಲ್ಲಿ ನಮ್ಮ ಸಮುದಾಯದವರು ಸೇರಿ ಕನಕ ಕೋ ಆಪರೇಟಿವ್ ಸೊಸೈಟಿ ಆರಂಭಿಸಿದ್ದು ಶಿಷ್ಟಾಚಾರದ ಪ್ರಕಾರ ಕಾರ್ಯಕ್ರಮದ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿದ್ದರು. ಇದೇ ವೇಳೆ ಆಯೋಜಕರು ಊಟಕ್ಕೆ ಏರ್ಪಾಡು ಮಾಡಿದ್ದರಿಂದ ಅವರ ಆತಿಥ್ಯದ ಮೆರೆಗೆ ತೆರಳಿದ್ದ ವೇಳೆ ಸಿದ್ದರಾಮಯ್ಯ ಅವರೊಂದಿಗೆ ಕುಳಿತು ಭೋಜನ ಸವಿದೆ. ಇದರಲ್ಲಿ ಇನ್ಯಾವುದೇ ವಿಶೇಷತೆ ಇಲ್ಲ. ಎಂಟಿಬಿ ನಾಗರಾಜ್, ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ
ಬಡವರಿಗೆ ಸಹಕಾರ ಸಂಘಗಳ ನೆರವು: ಸಹಕಾರ ಸಂಘಗಳು ಬಡವರ ಶ್ರೇಯೋಭಿವೃದ್ಧಿಗೆ ಹಲವು ರೀತಿ ನೆರವಾಗುತ್ತಿವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಕನಕನಗರದಲ್ಲಿ ಕನಕ ಸಮೃದ್ಧಿ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸಹಕಾರ ಸಂಘಗಳು ತನ್ನದೇ ಆದ ಮೈಲಿಗಲ್ಲು ಸ್ಥಾಪಿಸಿದ್ದು, ರಾಜ್ಯದಲ್ಲಿ 40 ಸಾವಿರಕ್ಕೂ ಅಧಿಕ ಸಂಘಗಳು ಕಾರ್ಯನಿರ್ವಹಿಸುತ್ತಿವೆ ಎಂದರು. ಪ್ರಮುಖವಾಗಿ ಕೃಷಿ, ಹೈನುಗಾರಿಕೆ ಸೇರಿ ಅನ್ನದಾತನ ಅಭ್ಯುದಯಕ್ಕೆ ಪೂರಕವಾಗುವಂತ ಕಾರ್ಯಗಳಿಗೆ ಆರ್ಥಿಕ ನೆರವು ಒದಗಿಸಬೇಕು. ಅಧ್ಯಕ್ಷರು ಎಲ್ಲ ಸದಸ್ಯರೊಂದಿಗೆ ಸಾಮರಸ್ಯ ಕಾಪಾಡಿಕೊಂಡು ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಪಕ್ಷಾತೀತ ನೆರವು: ಬಡವರನ್ನು ಆರ್ಥಿಕವಾಗಿ ಮೇಲೆತ್ತುವ ಸಲುವಾಗಿ ಕಿರು ಸಾಲಸೌಲಭ್ಯ ನೀಡುವ ಮೂಲಕ ಪಕ್ಷಾತೀತವಾಗಿ ಸಹಕಾರ ಬ್ಯಾಂಕ್‌ಗಳು ಶ್ರಮಿಸುತ್ತಿವೆ ಎಂದು ಶಾಸಕ ಶರತ್‌ಬಚ್ಚೇಗೌಡ ಹೇಳಿದರು. ಕರೊನಾ ಸಂದರ್ಭದಲ್ಲಿ ಸಂಘಗಳ ಲಾಭಾಂಶದಲ್ಲಿ ವೈದ್ಯಕೀಯ ಪರಿಕರ ವಿತರಣೆ ಸೇರಿ ಕರೊನಾ ಸೇನಾನಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಪ್ರೋತ್ಸಾಹ ನೀಡಿದ್ದು ಪ್ರಶಂಸನೀಯ ಎಂದರು.
ವಿಶ್ವಾಸವೇ ಜೀವಾಳ: ಕನಸ ಸೊಸೈಟಿಯೂ ಸಾರ್ವಜನಿಕ ಸೌಲಭ್ಯಗಳನ್ನು ನೀಡಿ ವಿಶ್ವಾಸ ಗಳಿಸುವ ಮೂಲಕ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವಂತಾಗಲಿ ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಶುಭ ಹಾರೈಸಿದರು.
ಸಹಕಾರಿ ಸಂಸ್ಥೆಗಳಿಗೆ ಷೇರುದಾರರು ಮತ್ತು ಗ್ರಾಹಕರ ವಿಶ್ವಾಸವೇ ಜೀವಾಳ ಎಂಬುದರ ಅರಿವಿರಬೇಕು, ಜನರ ವಿಶ್ವಾಸಗಳಿಸಿ ಪ್ರಗತಿಯತ್ತ ಕೊಂಡೊಯ್ಯಬೇಕು ಎಂದರು.
ಇತ್ತೀಚೆಗೆ ದೇಶದ ಕೆಲವೊಂದು ಸಹಕಾರಿ ಸೊಸೈಟಿಗಳ ಅಚಾತುರ್ಯ ಗಮನಿಸಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಸಂಸತ್‌ನಲ್ಲಿ ಡಿಪಾಸಿಟ್ ಇನ್ಶುರೆನ್ಸ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ ಬಿಲ್-2021 ಕಾಯ್ದೆ ಮೂಲಕ ಸಹಕಾರಿ ಸಂಸ್ಥೆಗಳು ದಿವಾಳಿಯಾದ ಸಂದರ್ಭದಲ್ಲಿ ಗ್ರಾಹಕರ ಠೇವಣಿಗೆ ನೀಡಲಾಗುತ್ತಿದ್ದ ಭರವಸೆಯ ವಿಮಾ ಮೊತ್ತವನ್ನು ಈ ಹಿಂದೆ ಇದ್ದ 1 ಲಕ್ಷ ಬದಲಿಗೆ 5 ಲಕ್ಷ ರೂ.ವರೆಗೆ ಹೆಚ್ಚಿಸಿ ಗರಿಷ್ಠ 90 ದಿನಗಳಲ್ಲಿ ಮರುಪಾವತಿ ಆಗುವಂತಹ ವಿಮಾ ರಕ್ಷಣೆ ಕಾಯ್ದೆ ಜಾರಿಗೆ ತಂದಿದ್ದಾರೆ ಎಂದು ಹೇಳಿದರು.