ಜಿಲ್ಲೆ

ಮಾಂಸ ಮಾರುಕಟ್ಟೆಯಲ್ಲಿ ಮೂಲಸೌಕರ್ಯಗಳ ಕೊರತೆ

ಸೋಮವಾರಪೇಟೆ: ಮಾಂಸ ಮಾರಾಟ ಮಾಡುವ ಮಾರುಕಟ್ಟೆ ಕಟ್ಟಡ ಸೋರುತ್ತಿದೆ, ಸಮರ್ಪಕವಾಗಿ ನೀರಿನ ವ್ಯವಸ್ಥೆ ಇಲ್ಲ, ತ್ಯಾಜ ಹಾಕಲು ಜಾಗವಿಲ್ಲ, ಈ ಬಗ್ಗೆ ಕಳೆದ ಕೆಲವು ವರ್ಷಗಳಿಂದ ಪಂಚಾಯಿತಿ ಆಡಳಿತದ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲವೆಂದು ಮಾರುಕಟ್ಟೆ ವರ್ತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ 2023-24ನೇ ಸಾಲಿನ ಮಾರುಕಟ್ಟೆ ಹರಾಜು ಸಂದರ್ಭದಲ್ಲಿ ಸಮರ್ಪಕ ಸೌಕರ್ಯಕ್ಕೆ ಆಗ್ರಹಿಸಿ ವರ್ತಕರು ತಮ್ಮ ಆಕ್ರೋಶ ಹೊರಹಾಕಿದರು. ಪಟ್ಟಣದ ಮಾರ್ಕೆಟ್ ಆವರಣದಲ್ಲಿರುವ ಕುರಿ, ಕೋಳಿ ಹಾಗೂ ಹಸಿ ಮೀನು ಮಾರುಕಟ್ಟೆ ಅತ್ಯಂತ ದುಸ್ಥಿತಿಯಲ್ಲಿದೆ. ಸಮರ್ಪಕ ವ್ಯವಸ್ಥೆ ಕಲ್ಪಿಸದೆ ಹರಾಜು ಪ್ರಕ್ರಿಯೆ ನಡೆಸಬೇಡಿ ಎಂದು ಆಗ್ರಹಿಸಿದರು.


ನಾವು ಲಕ್ಷಗಟ್ಟಲೆ ಹಣ ನೀಡಿ ಹರಾಜಿನಲ್ಲಿ ಪಡೆದು ವ್ಯಾಪಾರ ಮಾಡುತ್ತೇವೆ. ಆದರೆ ಹೊರ ಜಿಲ್ಲೆಯಿಂದ ಬಂದವರು ಕೋಳಿ ವ್ಯಾಪಾರ ಮಾಡುತ್ತಾರೆ. ಬೆಸ್ತರು ಬಂದು ರಸ್ತೆ ಪಕ್ಕದಲ್ಲಿ ವ್ಯಾಪಾರ ಮಾಡುತ್ತಾರೆ. ಇದರಿಂದಾಗಿ ವ್ಯಾಪಾರದಲ್ಲಿ ನಷ್ಟ ಅನುಭವಿಸುವಂತಗಿದೆ. ಮತ್ತೊಂದೆಡೆ ಪಕ್ಕದ ಚೌಡ್ಲೂ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡಿಮೆ ದರಕ್ಕೆ ಮಳಿಗೆ ಪಡೆದು, ಕಡಿಮೆ ದರಕ್ಕೆ ವ್ಯಾಪಾರ ನಡೆಸುತ್ತಿದ್ದಾರೆ. ಹೀಗಾಗಿ ನಾವು ಅವರೊಡನೆ ಸ್ಪರ್ಧೆ ಮಾಡಿ ವ್ಯಾಪಾರ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅವಲತ್ತು ಕೊಂಡರು.


ಈ ಸಂದರ್ಭ ಅಧ್ಯಕ್ಷ ಚಂದ್ರು ಹಾಗೂ ಮುಖ್ಯಾಧಿಕಾರಿ ನಾಚಪ್ಪ ಪ್ರತಿಕ್ರಿಯಿಸಿ, ಮುಂದಿನ ಮೂರ‌್ನಾಲ್ಕು ತಿಂಗಳಲ್ಲಿ ಮೂಲಸೌಕರ್ಯ ಕಲ್ಪಿಸಲಾಗುವುದು, ಕಟ್ಟಡ ದುರಸ್ತಿಪಡಿಸಲಾಗುವುದು ಹಾಗೂ ರಸ್ತೆ ಬದಿಯಲ್ಲಿ ಮೀನು ವ್ಯಾಪಾರ ಮಾಡುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ಸಂಜೀವ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಹಾಗೂ ಸದಸ್ಯರು ಇದ್ದರು.