ಜಿಲ್ಲೆ

ಮಾಂಸ ಮಾರಾಟದ ಅಡ್ಡೆ ಮೇಲೆ ದಾಳಿ

ಲಕ್ಷ್ಮೇಶ್ವರ: ಪಟ್ಟಣದ ಆಸಾರ ಓಣಿಯ ಉರ್ದು ಶಾಲೆ ಹತ್ತಿರ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಉಪ ತಹಸೀಲ್ದಾರ್ ನೇತೃತ್ವದಲ್ಲಿ ಪುರಸಭೆ ಅಧಿಕಾರಿಗಳು ಮಂಗಳವಾರ ದಾಳಿ ಮಾಡಿದರು.

ಲಾಕ್ ಡೌನ್ ಘೊಷಣೆಯಾದಾಗಿನಿಂದ ಪಟ್ಟಣದಲ್ಲಿ ಮಾಂಸ ಮಾರಾಟ ಮಾಡದಂತೆ ತಾಲೂಕಾಡಳಿತ ಹಾಗೂ ಪುರಸಭೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅದಕ್ಕೆ ಮಾಂಸ ಮಾರಾಟದ ಅಡ್ಡೆಯವರು ಮಾತ್ರ ಅದಕ್ಕೆ ಸ್ಪಂದಿಸಿಲ್ಲ. ಹೀಗಾಗಿ ಉಪ ತಹಸೀಲ್ದಾರ್ ಎಂ.ಜಿ. ದಾಸಪ್ಪನವರ ನೇತೃತ್ವದಲ್ಲಿ ಮಾಂಸ ಮಾರಾಟದ ಅಡ್ಡೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಮಾಂಸ ಮತ್ತು ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾಂಸ ಮಾರಾಟದ ಅಡ್ಡೆಗಳಲ್ಲಿ ಯಾರೊಬ್ಬರು ಇಲ್ಲದ್ದನ್ನು ಗಮನಿಸಿದ ನಾಯಿಗಳ ಹಿಂಡು ಮಾಂಸ ತಿನ್ನಲು ಮುಗಿಬಿದ್ದಿದ್ದವು.

ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸುತ್ತಿದಂತೆ ಮಾಂಸ ಮಾರಾಟಗಾರರು ಅಲ್ಲಿಂದ ಕಾಲ್ಕಿತ್ತಿದ್ದರು. ಗದಗ ರಸ್ತೆಯಲ್ಲಿ ಪುರಸಭೆಯಿಂದ ಲಕ್ಷಾಂತರ ರೂ. ವ್ಯಯಿಸಿ ಮಾಂಸ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದರೂ ಅದು ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಕೆಲವರು ಹಲವಾರು ವರ್ಷಗಳಿಂದ ಉರ್ದು ಶಾಲೆಯ ಹತ್ತಿರವೇ ದನದ ಮಾಂಸ ಕತ್ತರಿಸಿ ಮಾರಾಟ ಮಾಡುತ್ತಿದ್ದಾರೆ.

ಚಿಕನ್, ಮಟನ್ ಮಾರ್ಕೆಟ್ ಸ್ಥಳಾಂತರಿಸಿ

ಪುರಸಭೆ ಹತ್ತಿರವೇ ಜನವಸತಿ ಪ್ರದೇಶದಲ್ಲಿ ಮಾಂಸದ ಮಾರ್ಕೆಟ್ ಇದ್ದು, ಅದರ ಬಳಿಯೇ ಶ್ರೀ ಸೋಮೇಶ್ವರ ದೇವಸ್ಥಾನ, ಶಾಲೆ, ಅಂಗನವಾಡಿ ಕೇಂದ್ರಗಳಿವೆ. ಹೀಗಾಗಿ ಇಲ್ಲಿನ ಮಾಂಸದ ಮಾರುಕಟ್ಟೆ ಸ್ಥಳಾಂತರಿಸಬೇಕು ಎಂದು ಈ ಹಿಂದೆ ಜಿಲ್ಲಾಡಳಿತಕ್ಕೆ ಪಟ್ಟಣದ ಜನತೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ ಪುರಸಭೆಗೆ ಮಾರ್ಕೆಟ್ ಸ್ಥಳಾಂತರಿಸುವಂತೆ ಸೂಚನೆ ನೀಡಿತ್ತು. ಆದರೆ, ಪುರಸಭೆ ಮಾರ್ಕೆಟ್ ಎತ್ತಂಗಡಿಗೆ ಮೀನಮೇಷ ಎಣಿಸುತ್ತಿದೆ.

ಪಟ್ಟಣದಲ್ಲಿ ಅನಧಿಕೃತ ಮತ್ತು ಅಕ್ರಮವಾಗಿ ಮಾಂಸ ಮಾರಾಟ ಮಾಡಬಾರದೆಂದು ತಿಳಿಸಲಾಗಿದೆ. ಆದರೂ ಈ ಕಾರ್ಯ ಮಾಡುತ್ತಿರುವವರನ್ನು ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಲಾಗುತ್ತದೆ. ಪಟ್ಟಣದಲ್ಲಿ ನಡೆಯುತ್ತಿರುವ ಮಾಂಸ ಮಾರಾಟ ವ್ಯವಸ್ಥೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ. ಅಲ್ಲದೆ, ಪಟ್ಟಣದ ಕೇಂದ್ರ ಭಾಗದಲ್ಲಿ ಮಾಂಸ ಮಾರಾಟದ ಮಾರ್ಕೆಟ್ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.| ಆರ್.ಎಂ. ಪಾಟೀಲ, ಮುಖ್ಯಾಧಿಕಾರಿ, ಪುರಸಭೆ