ಹೊಸನಗರ: ಮಾಂಡೌಸ್ ಚಂಡಮಾರುತದ ಪರಿಣಾಮ ತಾಲೂಕಿನ ಬಹುತೇಕ ಭಾಗದಲ್ಲಿ ಮಳೆಯಾಗಿದ್ದು ಭತ್ತ ಬೆಳೆದ ರೈತರು ಆತಂಕಗೊಂಡಿದ್ದಾರೆ.
ತಾಲೂಕಿನ ನಗರ, ಹುಂಚಾ, ಕೆರೆಹಳ್ಳಿ ಮತ್ತು ಕಸಬಾ ಹೋಬಳಿಯಲ್ಲಿ ಮಳೆಗೆ ಭತ್ತದ ಫಸಲು ಸಿಲುಕಿ ಹಾನಿಗೀಡಾಗಿದೆ. ತಾಲೂಕಿನಾದ್ಯಂತ ಅಂದಾಜು 40 ಎಕರೆ ಪ್ರದೇಶದ ಭತ್ತದ ಬೆಳೆ ಹಾನಿಯಾಗಿರುವ ವರದಿಯಾಗಿದೆ.
ನಗರ ಹೋಬಳಿಯ ಮೂಡುಗೊಪ್ಪ, ಅರಮನೆಕೊಪ್ಪ, ಬೇಳೂರು, ಹೆಬ್ಬುರುಳಿ, ಅಂಡಗದೋದೂರು ಸೇರಿದಂತೆ ವಿವಿಧ ಭಾಗದಲ್ಲಿ ಕಟಾವು ಮಾಡಿದ ಭತ್ತ ಗದ್ದೆಯಲ್ಲೇ ಉಳಿಯುವಂತಾಗಿದೆ. ನಗರ ಹೋಬಳಿಯಲ್ಲಿ ಅಂದಾಜು 25 ಎಕರೆ ಪ್ರದೇಶ ಹಾನಿಗೀಡಾಗಿದ್ದು ಸಹಾಯಕ ಕೃಷಿ ಅಧಿಕಾರಿ ಶರಣಗೌಡ ಬಿರಾದಾರ್ ಜಮೀನುಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಹುಂಚಾ, ಕೆರೆಹಳ್ಳಿ, ಕಸಬಾ ಹೋಬಳಿ ಸೇರಿ 20 ರಿಂದ 25 ಎಕರೆ ಪ್ರದೇಶದಲ್ಲಿ ಭತ್ತ ಹಾನಿಯಾಗಿದೆ. ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎಂ.ಎಸ್.ಮಾರುತಿ ಹುಂಚಾ ಭಾಗದಲ್ಲಿ ಭೇಟಿ ನೀಡಿ ಪರಿಶೀಲಿದರು. ಈಗಾಗಲೇ ಬೆಳೆ ಹಾನಿ ಮಾಡಿಕೊಂಡ ರೈತರು ವಿಮೆ ಮಾಡಿಸಿದ್ದರೆ ಇಲಾಖೆಗೆ ಅಥವಾ ವಿಮಾ ಕಂಪನಿಗೆ ಮಾಹಿತಿ ನೀಡಬೇಕು. ವಿಮೆ ಮಾಡಿಸದ ಪ್ರದೇಶಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಕೃಷಿ ಇಲಾಖೆ ಮುಂದಾಗಿದೆ.
ಮಳೆಯಿಂದಾಗಿ ಕಟಾವು ಮಾಡಿದ ಭತ್ತ ಗದ್ದೆಯಲ್ಲೇ ಉಳಿಯುವಂತಾಗಿದೆ. ಹಲವು ರೈತರು ಮಳೆಯಿಂದಾಗಿ ಭತ್ತದ ಕಟಾವು ಮಾಡದೆ ಯೋಚಿಸುವಂತಾಗಿದೆ. ಕೆಲವು ರೈತರಂತೂ ಜಿಟಿಜಿಟಿ ಮಳೆಯ ನಡುವೆಯೂ ಭತ್ತ ಕಟಾವು ಮಾಡಿ ಒಕ್ಕಲು ಮಾಡಲು ಹರಸಾಹಸದಲ್ಲಿ ತೊಡಗಿದ್ದಾರೆ.