ಬಾಗಲಕೋಟೆ: ಶೃಂಗೇರಿ ಶಾರದಾ ಪೀಠದಿಂದ ವಿನಾಯಕ ನಗರದಲ್ಲಿ ನೂತನ ಶಂಕರಮಠ ನಿರ್ಮಿಸಲಾಗಿದ್ದು, ಮಾ.೮ ಹಾಗೂ ೯ ರಂದು ಶ್ರೀಶಕ್ತಿ ಗಣಪತಿ, ಶಾರದಾಂಬಾ, ಚಂದ್ರ ಮೌಳೀಶ್ವರ ಹಾಗೂ ಶಂಕರಾಚಾರ್ಯರ ಮೂರ್ತಿ ಪ್ರತಿಷ್ಠಾಪನಾ ವiತ್ತು ಕುಂಭಾಭಿಷೇಕ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಂಕರಮಠದ ವ್ಯವಸ್ಥಾಪಕ ಶಿವರಾಮ ಹೆಗಡೆ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯವಾಗಿ ಕಾರ್ಯಕ್ರಮಕ್ಕೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆಗಮಿಸಲಿದ್ದಾರೆ. ಮಾ.೮ ರಂದು ಸಂಜೆ ೫ ಗಂಟೆಗೆ ಕೊಪ್ಪಳದಿಂದ ಆಗಮಿಸುವ ಶ್ರೀಗಳು ಪುರಪ್ರವೇಶ, ಪೂರ್ಣ ಕುಂಭ ಸ್ವಾಗತ, ಶ್ರೀಗಳ ಶೋಭಾ ಯಾತ್ರೆ ಜರುಗಲಿದೆ ಎಂದರು.
ರೋಟರಿ ವೃತ್ತದಿಂದ ಆರಂಭವಾಗುವ ಶೋಭಾಯಾತ್ರೆಯು ಡಾ.ಕಟ್ಟಿ ಆಸ್ಪತ್ರೆ, ವಿನಾಯಕ ನಗರದ ಮುಖ್ಯ ರಸ್ತೆ ಮೂಲಕ ಹಾಯ್ದು ಶಂಕರಮಠಕ್ಕೆ ತಲುಪಲಿದೆ. ನಂತರ ಶಂಕರಮಠಕ್ಕೆ ಆಗಮಿಸುವ ಶ್ರೀಗಳಿಗೆ ಧೂಳಿ ಪಾದಪೂಜೆ, ಶ್ರೀಗಳವರಿಗೆ ಫಲ ಸಮರ್ಪಣೆ, ಶ್ರೀಗಳವರಿಂದ ಆಶೀರ್ವಚನ, ರಾತ್ರಿ ೮.೩೦ ಗಂಟೆಗೆ ಶ್ರೀಗಳವರಿಂದ ಶ್ರೀಚಂದ್ರ ಮೌಳೀಶ್ವರ ಪೂಜೆ ಹಾಗೂ ಪ್ರಸಾದ ವಿತರಣೆ ಜರುಗಲಿದೆ. ಈ ಸಂದರ್ಭದಲ್ಲಿ ಸಭಾ ಕಾರ್ಯಕ್ರಮ ಕೂಡಾ ನಡೆಯಲಿದೆ ಎಂದು ತಿಳಿಸಿದರು.
ಮಾ.೯ ರಂದು ಬೆಳಗ್ಗೆ ೮ ಗಂಟೆಗೆ ಶ್ರೀಮಠದ ಅರ್ಚಕರಿಂದ ಶ್ರೀ ಮೌಳೀಶ್ವರ ಪೂಜೆ, ೧೦ ಗಂಟೆಯಿAದ ಜಗದ್ಗುರು ವಿಧುಶೇಖರ ಭಾರತೀ ಶ್ರೀಗಳ ಅಮೃಥ ಹಸ್ತದಿಂದ ಶಕ್ತಿಗಣಪತಿ, ಶಾರದಾಂಬಾ, ಚಂದ್ರಮೌಳೀಶ್ವರ ಹಾಗೂ ಶಂಕರ ಭಗವತ್ಪಾದರ ಮೂರ್ತಿಗಳ ಕುಂಭಾಭಿಷೇಕ ಮಹೋತ್ಸವ, ಶ್ರೀಗಳ ದರ್ಶನ, ಭಕ್ತರಿಂದ ಪಾದ ಪೂಜೆ, ಭಿಕ್ಷಾ ವಂದನೆ ವಿವಿಧ ಸೇವೆಗಳು, ಶ್ರೀಗಳಿಂದ ಫಲಮಂತ್ರಾಕ್ಷತೆ ಮತ್ತು ಮಧ್ಯಾಹ್ನ ತೀರ್ಥ ಪ್ರಸಾದ ವಿತರಣೆ ಜರುಗಲಿದೆ ಎಂದು ಹೇಳಿದರು.
ವಿಧುಶೇಖರ ಭಾರತೀ ಶ್ರೀಗಳ ವಿಜಯ ಯಾತ್ರೆ:
ಡಾ.ಗಿರೀಶ ಮಾಸೂರಕರ ಮಾತನಾಡಿ, ವಿಧುಶೇಖರ ಭಾರತೀ ಶ್ರೀಗಳು ಮಾ.೭ ರಂದು ಸಂಜೆ ಬಾದಾಮಿ ಬನಶಂಕರಿಗೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿ ವಾಸ್ತವ್ಯ ಮಾಡಲಿದ್ದಾರೆ. ಮಾ.೮ ರಂದು ಬೆಳಗ್ಗೆ ಕೊಪ್ಪಳಕ್ಕೆ ತೆರಳಿ ಸಂಜೆ ಬಾಗಲಕೋಟೆಗೆ ಆಗಮಿಸಿ ವಾಸವ್ಯ ಮಾಡಲಿದ್ದಾರೆ. ಮಾ.೯ ರಂದು ಬೆಳಗ್ಗೆ ಬಾಗಲಕೋಟೆ ಶಂಕರಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ ಕಲಾದಗಿಯಲ್ಲಿ ವಿಜಯಯಾತ್ರೆ ಕೈಗೊಳ್ಳಲಿದ್ದಾರೆ. ನಂತರ ಜಮಖಂಡಿಗೆ ತೆರಳಿ ವಾಸವ್ಯ ಮಾಡಲಿದ್ದಾರೆ. ಮಾ.೧೦ ರಂದು ಅಲ್ಲಿಯು ನೂತನ ಶಂಕರ ಮಠದ ಉದ್ಘಾಟನೆ ಮಾಡಲಿದ್ದಾರೆ. ಸಂಜೆ ಮುಧೋದಲ್ಲಿ ವಿಜಯಯಾತ್ರೆ ಕೈಗೊಳ್ಳಲಿದ್ದಾರೆ. ಮಾ.೧೧ ರಂದು ಮುಧೋಳದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯ ನಡೆಸಿ ಸಂಜೆ ಕಲಬುರ್ಗಿ ಜಿಲ್ಲೆಯ ಗಾಣಾಗಾಪುರ ದತ್ತಪೀಠಕ್ಕೆ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮುಖಂಡರಾದ ವಾಮನರಾವ್ ಕೌಟೇಕರ್, ಕಿರಣ ಬಾಗಲಕೋಟ, ಡಾ.ರಾಜೇಂದ್ರ ಜೋಶಿ, ಎಸ್.ಕೆ.ಕುಲಕರ್ಣಿ ಉಪಸ್ಥಿತರಿದ್ದರು.