ಚಾಮರಾಜನಗರ: ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದನ್ವಯ ಮಾ.8ರಂದು ಜಿಲ್ಲೆಯಾದ್ಯಂತ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ.
ನ್ಯಾಯಾಲಯ ಆವರಣದಲ್ಲಿರುವ ಎ.ಡಿ.ಆರ್. ಕಟ್ಟಡದಲ್ಲಿ ಪೂರ್ವಭಾವಿ ಸಮಾಲೋಚನಾ ಕೇಂದ್ರದಲ್ಲಿ ಅಂದು ಲೋಕ ಅದಾಲತ್‌ನಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಬ್ಯಾಂಕ್ ವಸೂಲಾತಿ, ಉದ್ಯೋಗದಲ್ಲಿ ಮರುಸ್ಥಾಪಿಸಲ್ಪಡುವ ಪ್ರಕರಣಗಳು, ಕೈಗಾರಿಕಾ ಕಾರ್ಮಿಕ ವೇತನ, ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿನ ಪ್ರಕರಣಗಳು, ರಿಯಲ್ ಎಸ್ಟೇಟ್, ಸಾಲ ವಸೂಲಾತಿ ನ್ಯಾಯಾಧೀಕರಣದ ಪ್ರಕರಣಗಳು, ಕಾಯಂ ಜನತಾ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು, ಚೆಕ್ ಅಮಾನ್ಯ, ಮೋಟಾರ್ ಅಪಘಾತ ಪರಿಹಾರ, ಕಾರ್ಮಿಕ ವಿವಾದಗಳು, ವಿದ್ಯುತ್ ಮತ್ತು ನೀರಿನ ಶುಲ್ಕ, ಭೂ ಸ್ವಾಧೀನ ಪ್ರಕರಣಗಳು, ವೇತನ ಮತ್ತು ಭತ್ಯೆಗೆ ಸಂಬಂಧಿಸಿದ ಸೇವೆ ಹಾಗೂ ಪಿಂಚಣಿ, ಸಾರ್ವಜನಿಕ ಉಪಯುಕ್ತತೆ ಸೇವೆ, ರಾಜಿಯಾಗಬಲ್ಲ ಸಿವಿಲ್ ಹಾಗೂ ಇತರ ಪ್ರಕರಣಗಳು, ವೈವಾಹಿಕ ಕುಟುಂಬ ನ್ಯಾಯಾಲಯದ ಪ್ರಕರಣ (ವಿಚ್ಛೇದನವನ್ನು ಹೊರತುಪಡಿಸಿ)ಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು.
ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸಿದ್ದಲ್ಲಿ, ಮುಂಚಿತವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಆಯಾ ತಾಲೂಕು ಕಾನೂನು ಸೇವಾ ಸಮಿತಿಗಳನ್ನು ಆನ್‌ಲೈನ್, ವಿಡಿಯೋ ಕಾನ್ಫರೆನ್ಸ್, ಇ-ಮೇಲ್, ಎಸ್.ಎಂ.ಎಸ್, ವಾಟ್ಸ್ ಆಪ್ ಅಥವಾ ಖುದ್ದಾಗಿ ಹಾಜರಾಗುವ ಮೂಲಕ ಸಂಪರ್ಕಿಸಿ, ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಚಾಮರಾಜನಗರ ಸಹಾಯವಾಣಿ ಸಂಖ್ಯೆ-08226-226022 ಸಂಪರ್ಕಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.