ಗೋಣಿಕೊಪ್ಪ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಾರ್ಚ್ 4 ಮತ್ತು 5ರಂದು ನಡೆಸಲು ತೀರ್ಮಾನಿಸಲಾಯಿತು.
ಇಲ್ಲಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬುಧವಾರ ಶಾಸಕ ಕೆ.ಜಿ.ಬೋಪಯ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನ ಕುರಿತು ಚರ್ಚಿಸಲಾಯಿತು. 16ನೇ ಜಿಲ್ಲಾ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಲು ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಯಿತು. ವಿವಿಧ ಸಮಿತಿಗಳಿಗೆ ಈ ವೇಳೆ ಆಯ್ಕೆ ಮಾಡಲಾಯಿತು. ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ತಮ್ಮ ಸಲಹೆಗಳನ್ನು ನೀಡಿದರು.
ಕೆ.ಜಿ.ಬೋಪಯ್ಯ ಮಾತನಾಡಿ, ಸರ್ಕಾರದಿಂದ 5 ಲಕ್ಷ ರೂ. ಅನುದಾನ ಬಂದಿದೆ. ಮತ್ತಷ್ಟು ಆರ್ಥಿಕ ಕ್ರೋಡೀಕರಣಕ್ಕೆ ಎಲ್ಲರ ಸಹಕಾರ ಅಗತ್ಯ. ಅರ್ಥಪೂರ್ಣವಾಗಿ ಸಮ್ಮೇಳನ ನಡೆಸಲು ಒಂದಾಗಿ ತೊಡಗಿಕೊಳ್ಳಬೇಕಿದೆ. ಈಗಾಗಲೇ ಜಿಲ್ಲೆಯಲ್ಲಿ ಎರಡು ತಾಲೂಕು ಸಮ್ಮೇಳನ ಕನ್ನಡದ ಸಂದೇಶ ಸಾರಿದೆ. ಶೀಘ್ರವಾಗಿ ಅಧಿಕಾರಿಗಳ ಸಭೆ ಕರೆದು ಯೋಜನೆ ರೂಪಿಸಿಕೊಳ್ಳಲು ಸಲಹೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಎಂ. ಪಿ.ಕೇಶವ ಕಾಮತ್ ಮಾತನಾಡಿ, ಕಾರ್ಯಕಾರಿಣಿ ಸಭೆಯಲ್ಲಿ ಗೋಣಿಕೊಪ್ಪದಲ್ಲಿ ಜಿಲ್ಲಾ ಸಮ್ಮೇಳನ ನಡೆಸಬೇಕು ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು. ಅದರಂತೆ ಎಲ್ಲರ ಅನುಮತಿಯೊಂದಿಗೆ ಇಲ್ಲಿ ನಡೆಸಲಾಗುತ್ತಿದೆ. ಸಮ್ಮೇಳನ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.
ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಅರ್ಥಪೂರ್ಣವಾಗಿ ಸಮ್ಮೇಳನ ಆಯೋಜಿಸಬೇಕಿದೆ. ದ್ವಾರ ನಿರ್ಮಾಣ, ಸಭಾಂಗಣಕ್ಕೆ ಹೆಸರು ನೀಡಲು ಸಾಮೂಹಿಕ ಚರ್ಚೆ ನಡೆಸಿ ನಿರ್ಧರಿಸಬೇಕಿದೆ ಎಂದರು.
ಪೊನ್ನಂಪೇಟೆ ತಾಲೂಕು ಕಸಾಪ ಅಧ್ಯಕ್ಷ ಕೋಳೇರ ದಯಾ ಚೆಂಗಪ್ಪ, ವಿರಾಜಪೇಟೆ ಅಧ್ಯಕ್ಷ ರಾಜೇಶ್ ಪದ್ಮನಾಭ, ಗೋಣಿಕೊಪ್ಪ ಹೋಬಳಿ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಹುದಿಕೇರಿ ಹೋಬಳಿ ಅಧ್ಯಕ್ಷ ಬಾನಂಗಡ ಅರುಣ್, ಬಾಳೆಲೆ ಹೋಬಳಿ ಅಧ್ಯಕ್ಷ ಪಡಿಞರಂಡ ಪ್ರಭುಕುಮಾರ್, ತಾಲೂಕು ಕಾರ್ಯದರ್ಶಿ ಮನೆಯಪಂಡ ಶೀಲಾ ಬೋಪಣ್ಣ, ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಮನ್ನಕಮನೆ ಸೌಮ್ಯಾ ಬಾಲು ಇದ್ದರು.