ಜಿಲ್ಲೆ

ಮಾ.2ರಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ

ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾ.2ರಿಂದ 4ರವರೆಗೆ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದು ಸಮ್ಮೇಳನ ಸರ್ವಾಧ್ಯಕ್ಷೆಯಾಗಿ ಸಾಹಿತಿ ವಿಜಯಾ ಶ್ರೀಧರ್ ಆಯ್ಕೆಯಾಗಿದ್ದಾರೆ.

ಮಾ.2ರ ಬೆಳಗ್ಗೆ 8.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ರಾಷ್ಟ್ರ ಧ್ವಜ ಮತ್ತು ಮೇಯರ್ ಸುವರ್ಣಾ ಶಂಕರ್ ನಾಡ ಧ್ವಜಾರೋಹಣ ನೆರವೇರಿಸುವರು. ಉಪ ಮೇಯರ್ ಸುರೇಖಾ ಮುರಳೀಧರ್, ಮಾಜಿ ಮೇಯರ್ ಲತಾ ಗಣೇಶ್, ಮಾಜಿ ಉಪ ಮೇಯರ್ ಎಸ್.ಎನ್.ಚನ್ನಬಸಪ್ಪ ಮುಖ್ಯ ಅತಿಥಿಯಾಗಿರುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ಡಿ.ಬಿ.ಶಂಕರಪ್ಪ ತಿಳಿಸಿದರು.

ಬೆಳಗ್ಗೆ 9ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಎಸ್ಪಿ ಕೆ.ಎಂ.ಶಾಂತರಾಜು ಚಾಲನೆ ನೀಡುವರು. ಎಡಿಸಿ ಜಿ.ಅನುರಾಧಾ, ಎಸಿ ಟಿ.ವಿ.ಪ್ರಕಾಶ್, ಡಿಡಿಪಿಐ ಎಸ್.ಎನ್.ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಪಾಲ್ಗೊಳ್ಳಲಿದ್ದು ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ನೆಹರು ರಸ್ತೆ, ಬಾಲರಾಜ್ ಅರಸ್ ರಸ್ತೆ ಮಾರ್ಗವಾಗಿ ಕುವೆಂಪು ರಂಗಮಂದಿರ ತಲುಪಲಿದೆ.

ಬೆಳಗ್ಗೆ 10ಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಮ್ಮೇಳನ ಉದ್ಘಾಟಿಸುವರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಧ್ಯಕ್ಷತೆ ವಹಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಜಯಪ್ರಕಾಶ್ ಮಾವಿನಹುಳಿ ಮತ್ತು ಸಮ್ಮೇಳನಾಧ್ಯಕ್ಷೆ ವಿಜಯಾ ಶ್ರೀಧರ್, ಜಿಪಂ ಅಧ್ಯಕ್ಷ ಜ್ಯೋತಿ ಕುಮಾರ್, ಎಂಎಲ್​ಸಿಗಳಾದ ಎಸ್.ಎಲ್.ಭೋಜೇಗೌಡ, ಸಿ.ಎಂ.ಇಬ್ರಾಹಿಂ, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ತಾಪಂ ಅಧ್ಯಕ್ಷೆ ಗೀತಾ ಜಯಶೇಖರ್ ಮುಖ್ಯ ಅತಿಥಿಯಾಗಿರುವರು. ಸಾಹಿತಿಗಳಾದ ಡಾ. ನಾ.ಡಿಸೋಜಾ, ಡಾ. ಶ್ರೀಕಂಠ ಕೂಡಗಿ, ಡಾ. ಸಣ್ಣರಾಮ ಉಪಸ್ಥಿತರಿರುವರು ಎಂದರು.

ಮಾ.4ರ ಸಂಜೆ 5ಕ್ಕೆ ಸನ್ಮಾನ ಮತ್ತು ಸಮಾರೋಪ ನಡೆಯಲಿದ್ದು ಡಿಸಿ ಕೆ.ಬಿ.ಶಿವಕುಮಾರ್, ಎಸ್ಪಿ ಕೆ.ಎಂ.ಶಾಂತರಾಜು, ಜಿಪಂ ಸಿಇಒ ಎಂ.ಎಲ್.ವೈಶಾಲಿ ಅವರನ್ನು ಸನ್ಮಾನಿಸಲಾಗುವುದು. ಎಡಿಸಿ ಜಿ.ಅನುರಾಧಾ, ಕುವೆಂಪು ವಿವಿ ಕುಲಪತಿ ಡಾ. ಬಿ.ಪಿ.ವೀರಭದ್ರಪ್ಪ ಮಾತನಾಡುವರು. ವಿಜಯಾ ಶ್ರೀಧರ್ ಸರ್ವಾಧ್ಯಕ್ಷರ ನುಡಿ ನುಡಿಯುವರು. ಮಾಜಿ ಶಾಸಕರಾದ ಎಚ್.ಎಂ.ಚಂದ್ರಶೇಖರಪ್ಪ, ಕೆ.ಬಿ.ಪ್ರಸನ್ನಕುಮಾರ್, ಶಾರದಾ ಪೂರ್ಯಾನಾಯ್್ಕ ಜಿಲ್ಲಾ ವಾರ್ತಾಧಿಕಾರಿ ಶಫಿ ಸಾದುದ್ದೀನ್ ಉಪಸ್ಥಿತರಿರುವರು ಎಂದರು.

ಸಮ್ಮೇಳನದ ಗೋಷ್ಠಿಗಳು: ಮಾ.2ರಂದು ಮಧ್ಯಾಹ್ನ 12.30ಕ್ಕೆ ‘ಸಮ್ಮೇಳನಾಧ್ಯಕ್ಷರ ಸಾಹಿತ್ಯ ಅವಲೋಕನ’, ಮಧ್ಯಾಹ್ನ 2.15ಕ್ಕೆ ‘ಕನ್ನಡ ಸಾಹಿತ್ಯ ಪರಂಪರೆ-ಒಂದು ನೋಟ’, ಸಂಜೆ 5ಕ್ಕೆ ‘ಕಾವ್ಯ: ಒಂದು ಸಂವೇದನೆ’, ಮಾ.3ರ ಬೆಳಗ್ಗೆ 9ರಿಂದ ‘ಸರ್ವಾಧ್ಯಕ್ಷರೊಂದಿಗೆ ಸಂವಾದ’, ಬೆಳಗ್ಗೆ 10.45ಕ್ಕೆ ‘ನಮ್ಮ ಶಿವಮೊಗ್ಗ: ನಮ್ಮ ಚಂದ’, ಮಧ್ಯಾಹ್ನ 1.15ಕ್ಕೆ ‘ಕವಿ ಗೋಷ್ಠಿ’, ಮಧ್ಯಾಹ್ನ 3.15ಕ್ಕೆ ‘ಕಾದಂಬರಿ: ಒಂದು ಸಂವೇದನೆ’, ಸಂಜೆ 5.30ಕ್ಕೆ ‘ನಮ್ಮ ಜಿಲ್ಲೆ: ನಮ್ಮ ನೆಲೆ’ ಹಾಗೂ ಮಾ.4ರ ಬೆಳಗ್ಗೆ 9ಕ್ಕೆ ‘ವೈದ್ಯ ಸಾಹಿತ್ಯ’, ಬೆಳಗೆ 10.45ಕ್ಕೆ ‘ಕನ್ನಡ ಸಾಹಿತ್ಯದಲ್ಲಿ ಚಳುವಳಿಗಳ ನೆಲೆ’, ಮಧ್ಯಾಹ್ನ 12.45 ‘ಜಿಲ್ಲೆಯ ಯುವಕರ ಹೊಸ ಹೆಜ್ಜೆ’ ಮಧ್ಯಾಹ್ನ 1ಕ್ಕೆ ಕವಿಗೋಷ್ಠಿ ನಡೆಯಲಿದೆ.

ಬಿಡುಗಡೆಯಾಗುವ ಪುಸ್ತಕಗಳು: ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ‘ಸಿದ್ಧಗಂಗಾ ಶ್ರೀ’, ‘ಸಾಹಿತ್ಯ ಅಭಿಯಾನ’, ‘ಜಾನಪದ ಸೊಗಡು’, ‘ಮನ ಮುಟ್ಟುವುದು ನೋಡಾ ಬಾನಂಗಳ’, ‘ಕಂಚಿನ ಕಹಳೆ ಮಿಂಚಿನ ಮಳೆ’, ‘ಕಾಮೋಡ ಕರಗಿತು’, ‘ಮೊದಲ ಮಳೆ’ ಹಾಗೂ ’ನೀ ದೀಪವಾಗು’ ಪುಸ್ತಕಗಳನ್ನು ಗಣ್ಯರು ಬಿಡುಗಡೆಗೊಳಿಸುವರು.

ಶಿಕ್ಷಣ ಇಲಾಖೆ ಕ್ರಮಕ್ಕೆ ಬೇಸರ: ಯುವ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಆದರೆ ಸಮ್ಮೇಳನದಲ್ಲಿ ಶಾಲಾ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಶಿಕ್ಷಣ ಇಲಾಖೆ ತಡೆಹಿಡಿದಿರುವುದು ವಿಪರ್ಯಾಸ. ನಗರ ಬಿಇಒ ಪಿ.ನಾಗರಾಜ್ ಇಂತಹ ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಡಿ.ಬಿ.ಶಂಕರಪ್ಪ ಹೇಳಿದರು.