ಜಿಲ್ಲೆ

ಮಾ.1ರಂದು ಜನಜಾಗೃತಿ ಬೈಕ್ ಜಾಥ ನಗರಕ್ಕೆ ಆಗಮನ

Hassan - Mohan Kanthur

ಹಾಸನ: ಕರ್ನಾಟಕಕ್ಕಾಗಿ ನಾವು ಎನ್ನುವ ಶೀರ್ಷಿಕೆಯಲ್ಲಿ ಫೆ.19ರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೆಆರ್‌ಎಸ್ ಪಕ್ಷವು ರಾಜ್ಯವ್ಯಾಪಿ ಹಮ್ಮಿಕೊಂಡಿರುವ ಜನಜಾಗೃತಿ ಬೈಕ್ ಜಾಥ ಮಾ.1ರಂದು ಹಾಸನ ನಗರಕ್ಕೆ ಆಗಮಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಉಮೇಶ್ ಬೆಳಗುಂಬ ತಿಳಿಸಿದರು.
ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸಿ ಎಂದು ರಾಜ್ಯದ ಜನರನ್ನು ಕೋರಲು ಹಾಗೂ ಪ್ರಾಮಾಣಿಕ, ಜನಪರ, ಪ್ರಾದೇಶಿಕ ರಾಜಕಾರಣದ ಕುರಿತು ಜನ ಜಾಗೃತಿ ಮೂಡಿಸಲು ಬೈಕ್ ಜಾಥವನ್ನು ನಡೆಸಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
29 ಜಿಲ್ಲಾ ಕೇಂದ್ರಗಳು ಮತ್ತು ಐವತ್ತಕ್ಕಿಂತ ಹೆಚ್ಚು ತಾಲೂಕು ಕೆಂದ್ರಗಳು ಸೇರಿದಂತೆ ಸುಮಾರು 82 ಪಟ್ಟಣ ಮತ್ತು ನಗರಗಳಲ್ಲಿ ಸಾರ್ವಜನಿಕ ಸಭೆ ನಡೆಸಲಾಗಿದೆ. ಮಾರ್ಚ್ 1 ರಂದು ಬೈಕ್ ಜಾಥವು ಹಾಸನಕ್ಕೆ ಆಗಮಿಸಿ ನಗರದ ಸಿಟಿ ಬಸ್ ನಿಲ್ದಾಣದ ಬಳಿ ಮಧ್ಯಾಹ್ನ 3 ಗಂಟೆಗೆ ವೇದಿಕೆ ಸಮಾರಂಭ ನಡೆಯಲಿದೆ. ಇದಾದ ಬಳಿಕ ಬೇಲೂರು, ಚನ್ನರಾಯಪಟ್ಟಣ ಮೂಲಕ ಜಾಥ ಸಾಗಲಿದೆ. ಮಾರ್ಚ್ 2 ರಂದು ಶನಿವಾರ ನೆಲಮಂಗಲದಲ್ಲಿ ಸಮಾರೋಪ ಸಮಾವೇಶ ನಡೆಯಲಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಕೆಆರ್‌ಎಸ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಹಾಗೆಯೇ ಜುಲೈ- ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸಹ ಪಕ್ಷ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಈ ಚುನಾವಣೆಗಳಲ್ಲಿ ಸ್ಪರ್ಧಿಸಲು ಪ್ರಾಮಾಣಿಕ ಮತ್ತು ನ್ಯಾಯಪರ ವ್ಯಕ್ತಿಗಳಿಗೆ ಮುಕ್ತ ಆಹ್ವಾನ ನೀಡುತ್ತಿದೆ ಎದರು.
ಸುದ್ದಿಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ಉಪಾಧ್ಯಕ್ಷ ಬಿ.ಕೆ. ನಾಗರಾಜು, ಪದಾಧಿಕಾರಿಗಳಾದ ಅಪ್ಪಣ್ಣ, ಆದೀಶ್, ವಿ. ರಮೇಶ್ ಬೂವನಹಳ್ಳಿ ಇತರರು ಉಪಸ್ಥಿತರಿದ್ದರು.