ಜಿಲ್ಲೆ

ಮಾ.1ರಂದು ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸ್ಮಾರಕ ಶಂಕುಸ್ಥಾಪನೆ

ಹಾಸನ: ಮಾರ್ಚ್ 1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರದ ಶಂಕುಸ್ಥಾಪನೆ ನರವೇರಿಸಲಿದ್ದಾರೆ ಎಂದು ನಾಲ್ವಡಿ ಹೋರಾಟ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀಧರ್ ಕಲಿವೀರ್ ಹೇಳಿದರು.
ಹಾಸನದಲ್ಲಿ ಒಂದು ಶತಮಾನದ ಹಿಂದೆ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯವರ್ ಅವರು ಹಿಂದುಳಿದ ಜಾತಿಗಳ ಶಿಕ್ಷಣಕ್ಕಾಗಿ ಉಚಿತ ವಸತಿ ಶಾಲೆಯಾದ ಕರ್ನಾಟಕ ಬೋಡಿರ್ಂಗ್ ಹೋಂ ಸ್ಥಾಪಿಸಿದ್ದು, ಅದು ಇಂದಿಗೂ ಇದೆ. ಈ ಸ್ಥಳಕ್ಕೆ 1954ರಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಭೇಟಿ ನೀಡಿ ಭಾಷಣ ಮಾಡಿದ್ದರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸದರಿ ಸ್ಥಳದಲ್ಲಿ ನಿರ್ಮಾಣವಾಗುವ ಕಟ್ಟಡದ ಶಂಕುಸ್ಥಾಪನೆ ಸಮಾರಂಭಕ್ಕೆ ಮುಖ್ಯಮಂತ್ರಿ ಆಗಮಿಸುತ್ತಿರುವುದು ಜಿಲ್ಲೆಯ ಕೋಟ್ಯಂತರ ಜನತೆಗೆ ಸಂತೋಷ ಮತ್ತು ಹೆಮ್ಮೆ ತಂದಿದೆ. ಜಿಲ್ಲಾಡಳಿತವು ಸಾರ್ವಜನಿಕರನ್ನು ಕರೆತರಲು ಸರ್ಕಾರಿ ಬಸ್ಸುಗಳ ವ್ಯವಸ್ಥೆ ಮತ್ತು ಮಧ್ಯಾಹ್ನದ ಆಹಾರದ ವ್ಯವಸ್ಥೆಯನ್ನು ಮಾಡಿದೆ. ಸಾರ್ವಜನಿಕರು ಸಹಸ್ರಾರು ಸಂಖ್ಯೆಯಲ್ಲಿ ಸದರಿ ಸಮಾರಂಭಕ್ಕೆ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ವಿಜಯ ಕುಮಾರ್ ಬಾಗಿವಾಳ್, ಉಪಾಧ್ಯಕ್ಷ ಕೃಷ್ಣದಾಸ್, ಡಾ. ಬಾಬು ಜಗಜೀವನ್ ರಾಮ್ ಮಾದಿಗ ದಂಡೋರ ಮಹಾಸಭಾ ಅಧ್ಯಕ್ಷ ಶಂಕರರಾಜು, ಕರ್ನಾಟಕ ದಸಂಸ ರಾಜ್ಯ ಸಂಘಟನಾ ಸಮಿತಿಯ ಅಂಬೂಗ ಮಲ್ಲೇಶ್, ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಉಳುವಾರೆ, ಎಂ.ವಿ. ಗೋವಿಂದ ರಾಜು ಇತರರು ಉಪಸ್ಥಿತರಿದ್ದರು.