ಹಾಸನ : ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ತಾಲೂಕು ಘಟಕ, ಸಕಲೇಶಪುರ ಹಾಗೂ ಮಲೆನಾಡು ಜಾನಪದ ಉತ್ಸವ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಮಾ.19ರ ಭಾನುವಾರ ‘ಮಲೆನಾಡು ಜಾನಪದ ಉತ್ಸವ’ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ ತಿಳಿಸಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾನಪದ ನಮ್ಮ ಸಂಸ್ಕೃತಿಯಾಗಿದ್ದು, ಅದನ್ನು ಉಳಿಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಹಲವು ವಿನೂತನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬಂದಿದೆ. ಅದೇ ರೀತಿ ಸಕಲೇಶಪುರ ತಾಲೂಕಿನ ಯಸಲೂರು ಹೋಬಳಿ ಈಚಲಬೀಡು ಗ್ರಾಮದ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಲೆನಾಡು ಜಾನಪದ ಉತ್ಸವವನ್ನು ಏರ್ಪಡಿಸಲಾಗಿದೆ. ಮಾ.19ರ ಬೆಳಗ್ಗೆ 9:30ಕ್ಕೆ ವಿವಿಧ ಕಲಾತಂಡಗಳ ಮೆರವಣಿಗೆ ಮೂಲಕ ಕ್ಷೇತ್ರದ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಅವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಮೆರವಣಿಗೆಯು ಬಸವೇಶ್ವರ ದೇವಸ್ಥಾನದಿಂದ ಕಾಮನಹಳ್ಳಿ ದಿ. ಈರಮ್ಮ ಮತ್ತು ದಿ. ತಮ್ಮೇಗೌಡರ ವೇದಿಕೆವರೆಗೂ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹಾಗೂ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಲೆನಾಡು ಜಾನಪದ ಉತ್ಸವ ಸಮಿತಿ ಅಧ್ಯಕ್ಷ ಆರ್.ಪಿ. ಲಕ್ಷ್ಮಣ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್, ಮುದ್ದುಕೃಷ್ಣ, ಆರ್.ಪಿ. ವೆಂಕಟೇಶ್ ಮೂರ್ತಿ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಗಣನೀಯ ಸೇವೆ ಸಲ್ಲಿಸಿದ 11 ಮಂದಿ ಸಾಧಕರನ್ನು ಸನ್ಮಾನಿಸಲಾಗುವುದು. ಜೊತೆಗೆ 18 ವಿವಿಧ ಕಲಾ ಪ್ರಕಾರಗಳ ಜಾನಪದ ತಂಡಗಳು ಕೂಡ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಾಹಿತಿ ಮೇಟಿಕೆರೆ ಹಿರಿಯಣ್ಣ, ಪರಿಷತ್ತಿನ ಪದಾಧಿಕಾರಿಗಳಾದ ಆನಂದ್ ಕುಮಾರ್, ಕೃಷ್ಣೇಗೌಡ, ದಿನೇಶ್ ಹಾಜರಿದ್ದರು.