ಜಿಲ್ಲೆ

ಮಾ.11ಕ್ಕೆ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ; 10 ದಿನ ಭಾವಚಿತ್ರ ರಥಯಾತ್ರೆ

ಸಾಗರ: ಶ್ರೇಷ್ಠ ರಾಜಕಾರಣಿ, ಹೋರಾಟಗಾರರಲ್ಲಿ ಶಾಂತವೇರಿ ಗೋಪಾಲಗೌಡರು ಒಬ್ಬರು. ಅವರ ಸಮಾಜವಾದಿ ಸಿದ್ಧಾಂತದ ಹೋರಾಟ, ಶಾಸಕರಾಗಿದ್ದಾಗಿನ ಪಾರದರ್ಶಕ ನಡೆನುಡಿ ಕುರಿತು ಜನರಿಗೆ ಮಾಹಿತಿ ತಲುಪಿಸಲು ಮಾ.11ರಂದು ನಗರದ ಗಾಂಧಿ ಮೈದಾನದಲ್ಲಿ ಶಾಂತವೇರಿ ಗೋಪಾಲಗೌಡರ ಜನ್ಮಶತಾಬ್ದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜನ್ಮ ಶತಮಾನೋತ್ಸವ ಆಚರಣಾ ಸಮಿತಿ ಸಂಚಾಲಕ ಶಿವಾನಂದ ಕುಗ್ವೆ ಹೇಳಿದರು.

ಸರ್ಕಾರದಿಂದ ಕಾರ್ಯಕ್ರಮ ಆಯೋಜನೆಯಾಗಿದ್ದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಗೃಹ ಆರಗ ಜ್ಞಾನೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಮಾಜಿ ಶಾಸಕರಾದ ಕೋಣಂದೂರು ಲಿಂಗಪ್ಪ, ಬಿ.ಧರ್ಮಪ್ಪ, ಬಿ.ಸ್ವಾಮಿರಾವ್, ಗೋಪಾಲಕೃಷ್ಣ ಬೇಳೂರು, ಮಧು ಬಂಗಾರಪ್ಪ, ಪ್ರಮುಖರಾದ ಮಾಜಿ ಸ್ಪೀಕರ್ ರಮೇಶ್‌ಕುಮಾರ್, ಬಡಗಲಪುರ ನಾಗೇಂದ್ರ, ಡಾ. ರಾಮಪ್ಪ ಹೊಳೆಕೊಪ್ಪ, ನಾ.ಡಿಸೋಜ, ವಿಲಿಯಂ ಇತರರು ಪಾಲ್ಗೊಳ್ಳುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾ.1ರಿಂದ 10ರವರೆಗೆ ಸಾಗರ, ಹೊಸನಗರ, ಸೊರಬ ತಾಲೂಕಿನಲ್ಲಿ ಗೋಪಾಲಗೌಡರ ಭಾವಚಿತ್ರ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಗೋಪಾಲಗೌಡರ ಹೋರಾಟದ ಫಲಾನುಭವಿ ಕುಟುಂಬಗಳಿಗೆ ಭಾವಚಿತ್ರ ಹಂಚಲಾಗುತ್ತದೆ. ಮಾರ್ಚ್ 11ರಂದು ಬೆಳಗ್ಗೆ 9 ಗಂಟೆಗೆ ಸತ್ಯಾಗ್ರಹ ಭೂಮಿ ಕಾಗೋಡಿನಿಂದ ಭೂಮಣ್ಣಿ ಬುಟ್ಟಿಯಲ್ಲಿ ನೆಲದ ಪವಿತ್ರ ಮಣ್ಣನ್ನು ಸಂಗ್ರಹಿಸಿ ಸಮಾವೇಶ ನಡೆಯುವ ಸ್ಥಳಕ್ಕೆ ಜಾಥಾ ಮೂಲಕ ತರಲಾಗುತ್ತದೆ ಎಂದರು.

ಕಾರ್ಯಕ್ರಮದ ಯಶಸ್ಸಿಗಾಗಿ ಕಾಗೋಡು ತಿಮ್ಮಪ್ಪ ಅಧ್ಯಕ್ಷರಾಗಿ, ಹರತಾಳು ಹಾಲಪ್ಪ ಗೌರವಾಧ್ಯಕ್ಷರಾಗಿ, ಪ್ರಫುಲ್ಲಾ ಮಧುಕರ್ ಕಾರ್ಯಾಧ್ಯಕ್ಷರಾಗಿರುವ ಆಚರಣಾ ಸಮಿತಿ ರಚಿಸಲಾಗಿದೆ. ಎನ್.ಡಿ.ವಸಂತಕುಮಾರ್ ಸಂಯೋಜಕರಾಗಿ, ಬಿ.ಆರ್.ಜಯಂತ್, ಶಿವಾನಂದ ಕುಗ್ವೆ, ಕಲಸೆ ಚಂದ್ರಪ್ಪ ಸಂಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.