ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಪರವಾಗಿ ಬಿ.ವೈ ವಿಜಯೇಂದ್ರ ಶುಕ್ರವಾರ ರೋ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು. ಎನ್.ಮಹೇಶ್, ಮಹೇಂದರ್ ಇತರರು ಇದ್ದಾರೆ.  
ಜಿಲ್ಲೆ

ಮಹೇಶಣ್ಣ ರಾಜ್ಯದ ದಲಿತರ ಧ್ವನಿ

ಕೊಳ್ಳೇಗಾಲ: ಮಹೇಶಣ್ಣ ರಾಜ್ಯದ ದಲಿತರ ಧ್ವನಿಯಾಗಿದ್ದಾರೆ. ಈ ಭಾರಿ ಮಹೇಶಣ್ಣ ಗೆದ್ದರೆ ರಾಜ್ಯದ ಮಂತ್ರಿಯಾಗುತ್ತಾರೆ. ಅವರ ಗೆಲುವು ಬಿ.ಎಸ್. ಯಡಿಯೂರಪ್ಪನವರ ಗೆಲುವು ಎಂದು ಭಾರತೀಯ ಜನತಾ ಪಾರ್ಟಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಶ್ರೀ ಬೊಮೇಶ್ವರ ದೇವಾಲಯದ ಬಳಿಯಿಂದ ಶುಕ್ರವಾರ ರೋಡ್ ಶೋ ಪ್ರಾರಂಭಿಸಿ ನೂರಾರು ಬಿಜೆಪಿ ಕಾರ್ಯಕರ್ತರ ಬೈಕ್ ರ‌್ಯಾಲಿಯ ಜತೆಗೂಡಿ ಪಟ್ಟಣಕ್ಕೆ ಆಗಮಿಸಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಪ್ರಮುಖ ರಸ್ತೆಗಳಲ್ಲಿ ಸಾಗಿ ಅಚ್ಗಾಳ್ ಯಾತ್ರಿನಿವಾಸ ವೃತ್ತದಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಪರ ಮತಯಾಚನೆ ಮಾಡಿದರು.
ಶಾಸಕ ಮಹೇಶ್ ಅವರ ಗೆಲುವಿಗಾಗಿ ಕ್ಷೇತ್ರದ ಜನರ ಬಳಿ ಪ್ರಾರ್ಥಿಸಲು ಬಂದಿದ್ದೇನೆ. ಅವರು ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ. ಕೊಳ್ಳೇಗಾಲಕ್ಕೂ ನನಗೂ ಅವಿನಾಭವ ಸಂಬಂಧವಿದೆ. 2 ವರ್ಷಗಳ ಕಾಲ ಲಯನ್ಸ್ ಶಾಲೆಯಲ್ಲಿ ಓದಿದ್ದೇನೆ. ಇಲ್ಲಿಗೆ ಬರಲೂ ನನಗೆ ಬಹಳ ಸಂತೋಷವಾಗುತ್ತದೆ ಎಂದರು.
ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದ್ದ ಸಂಧರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ತಂತ್ರಗಾರಿಕೆ ಹೆಣೆದಿತ್ತು. ಇಂತಹ ಸಂದಿಗ್ಧತೆಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಾಗಬೇಕು. ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯ ಮಂತ್ರಿಗಳಾಬೇಕೆಂದು ಜೆಡಿಎಸ್ ಹಾಗೂ ಕಾಂಗ್ರೆಸ್‌ನಿಂದ 15 ಶಾಸಕರು ಹೊರ ಬಂದರು. ಅಂತೆಯೇ, ಅಂದು ಮಹೇಶಣ್ಣ ಕೂಡ ನಾನು ಬಿಎಸ್ಪಿಯಿಂದ ಹೊರ ಬಂದರು. ಯಡಿಯೂರಪ್ಪ ಸಿಎಂ ಆಗಲೂ ಮಹೇಶಣ್ಣನೂ ಕಾರಣ ಎಂದರು.
ಮಹೇಶಣ್ಣ ರಾಜ್ಯದ ದಲಿತರ ಧ್ವನಿಯಾಗಿದ್ದಾರೆ. ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕಿದೆ. 2014ರಲ್ಲಿ ಮೋದಿ ಅವರು ಪ್ರಧಾನಿಯಾಗಿದ್ದ ವೇಳೆ ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಕೇಂದ್ರದಿಂದ ಅನೇಕ ಜನಪರ ಯೋಜನೆಗಳು ಬಂದರೂ ರಾಜ್ಯದಲ್ಲಿದ್ದ ಕಾಂಗ್ರೆಸ್ ಅನುಷ್ಠಾನಗೊಳಿಸಲಿಲ್ಲ. ಹಾಗಾಗಿ ಬಿಜೆಪಿ ಕಾರ್ಯಕರ್ತರೆಲ್ಲರೂ ಶಪಥ ಮಾಡಬೇಕಿದೆ. ಮತ್ತೆ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ತರಬೇಕು. 224 ಕ್ಷೇತ್ರಗಳ ಮೊದಲ ಗೆಲುವು ಕೊಳ್ಳೇಗಾಲದ ಮಹೇಶಣ್ಣ ನಿಂದಲೇ ಪ್ರಾರಂಭವಾಗಬೇಕೆಂದು ಮನವಿ ಮಾಡಿದರು.
ಗೆದ್ದ ಮೇಲೆ ಬಿಎಸ್‌ವೈ ನಿವಾಸಕ್ಕೆ ಬರಲಿಲ್ಲ: ಹಿಂದೆ ಕೊಳ್ಳೇಗಾಲ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ನಿಂತು ಗೆದ್ದ ಬಿಜೆಪಿ ಅಭ್ಯರ್ಥಿ. ಗೆದ್ದು 24 ತಾಸು ಸಹ ಆಗಿರಲಿಲ್ಲ. ಬೆಂಗಳೂರಿನಲ್ಲಿ ಯಡಿಯೂರಪ್ಪನವರ ಮನೆಗೆ ಬಾರದೆ, ಬೇರೆ ಕಡೆ ಮುಖ ಮಾಡಿ ಹೋಗಿದ್ದರು. ಅಂತಹ ವ್ಯಕ್ತಿಯನ್ನು ಈ ಕ್ಷೇತ್ರದಲ್ಲಿ ನಾವು ನೋಡಿದ್ದೇವೆ ಎಂದು ಹೆಸರು ಹೇಳದೆ ಜಿ.ಎನ್. ನಂಜುಂಡಸ್ವಾಮಿ ಅವರ ಕಾಲೆಳೆದರು.

ಶಾಸಕ ಎನ್.ಮಹೇಶ್, ಚಿತ್ರ ನಿರ್ದೇಶಕ ಮಹೇಂದರ್, ಜಿಲ್ಲಾ ಬಿಜೆಪಿ ವಕ್ತಾರ ಬಸವರಾಜಪ್ಪ, ಕರ್ನಾಟಕ ಮೃಗಾಲಯದ ಪ್ರಾಧಿಕಾರ ನಿರ್ದೇಶಕಿ ಜ್ಯೋತಿ ರೇಚಣ್ಣ, ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ಜಕ್ಕಾವುಲ್ಲಾ, ನಗರಸಭೆ ಸದಸ್ಯ ಚಿಂತು ಪರಮೇಶ್, ಒಬಿಬಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಕಿರಣ್ ಮತ್ತಿತರಿದ್ದರು.