ಹುಬ್ಬಳ್ಳಿ: ಮಹಾನಗರ ಬಿಜೆಪಿಯಲ್ಲಿ ಹಲವು ತಿಂಗಳಿಂದ ಮಡುಗಟ್ಟಿದ್ದ ಭಿನ್ನಮತ ಸ್ಪೋಟಗೊಂಡಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಉಚ್ಚಾಟನೆಗೆ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಬಹಿರಂಗವಾಗಿ ಆಗ್ರಹಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಟೆಂಗಿನಕಾಯಿಯವರ ಉಚ್ಚಾಟನೆಗೆ ಎರಡು ತಿಂಗಳ ಹಿಂದೆಯೇ ಪತ್ರ ಬರೆದಿದ್ದೆ. ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇದೀಗ ಮತ್ತೆ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದು ಒತ್ತಾಯಿಸಿದ್ದೇನೆ ಎಂದರು.
ರಾಜ್ಯದ ಉಪಚುನಾವಣೆಗೂ ಮೊದಲು ನಗರದ ಡೆನಿಸನ್ಸ್ ಹೋಟೆಲ್ನಲ್ಲಿ ಏರ್ಪಾಟಾಗಿದ್ದ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಕಾಂಗ್ರೆಸ್ನವರು ಅದನ್ನೇ ಹಿಡಿದುಕೊಂಡು ದೇಶಾದ್ಯಂತ ಹುಯಿಲೆಬ್ಬಿಸಿದ್ದರು. ಅಲ್ಲದೆ, ಅನರ್ಹ ಶಾಸಕರ ವಿಚಾರದಲ್ಲಿ ಸುಪ್ರೀಂ ಕೋರ್ಟ್ಗೂ ದಾಖಲೆಯಾಗಿ ಸಲ್ಲಿಸಿದ್ದರಿಂದ ಬಿಎಸ್ವೈ, ಜಗದೀಶ ಶೆಟ್ಟರ್, ಪ್ರಲ್ಹಾದ ಜೋಶಿ ಸೇರಿ ಅನೇಕ ನಾಯಕರು ಮುಜುಗರಕ್ಕೊಳಗಾಗಿದ್ದರು. ಇದಕ್ಕೆಲ್ಲ ಮಹೇಶ ಟೆಂಗಿನಕಾಯಿ ಕಾರಣ. ಅವರೇ ವಿಡಿಯೋ ಮಾಡಿಸಿ ಮಾಧ್ಯಮಗಳಿಗೆ ಕಳಿಸಿದ್ದರು ಎಂದು ಆರೋಪಿಸಿದರು.
ಯಡಿಯೂರಪ್ಪ ಅವರನ್ನು ಅಧಿಕಾರ ವಂಚಿತರನ್ನಾಗಿ ಮಾಡುವ ಷಡ್ಯಂತ್ರ ಇದರಲ್ಲಿ ಅಡಗಿತ್ತು. ಈ ಭಾಗದ ನಾಯಕರಾದ ಜಗದೀಶ ಶೆಟ್ಟರ್, ಪ್ರಲ್ಹಾದ ಜೋಶಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸವೂ ಆಗಿತ್ತು. ಆಗ ತಾನೇ ಅಧಿಕಾರಕ್ಕೆ ಬಂದಿದ್ದ ಪಕ್ಷ ಇನ್ನೂ ಸುಭದ್ರವಾಗಿರಲಿಲ್ಲ. ಉಪಚುನಾವಣೆ ಎದುರಾಗಿದ್ದ ಸಂದರ್ಭದಲ್ಲಿ ಪಕ್ಷದ ನಾಯಕರು ಶಿಸ್ತು ಕ್ರಮ ಕೈಗೊಂಡಿರಲಿಕ್ಕಿಲ್ಲ. ಈಗ ಜನರ ಆಶೀರ್ವಾದದಿಂದ ಸರ್ಕಾರ ಭದ್ರವಾಗಿದೆ. ನಮ್ಮ ನಾಯಕರ ಮುಜುಗರಕ್ಕೆ ಕಾರಣವಾದ ಹಾಗೂ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಇದು ಸುಸಮಯ ಎಂದು ನೆನಪಿಸುತ್ತಿದ್ದೇನೆ ಎಂದರು.
ಮಹೇಶ ಟೆಂಗಿನಕಾಯಿ ಪ್ರತಿಯೊಂದರಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಪಕ್ಷದ ನೇಮಕಾತಿ, ಉತ್ಸವ ಆಚರಣೆ ಇತ್ಯಾದಿಗಳಲ್ಲಿ ತಮಗೆ ಬೇಕಾದವರಿಗೆ ಮಣೆ ಹಾಕುತ್ತಿದ್ದಾರೆ. ಇದರಿಂದ ಪ್ರಾಮಾಣಿಕ ಕಾರ್ಯಕರ್ತರಿಗೆ ಬೇಸರವಾಗುತ್ತಿದೆ. ಬಿಜೆಪಿಯನ್ನು ಹು-ಧಾ ಮಹೇಶ ಟೆಂಗಿನಕಾಯಿ ಲಿಮಿಟೆಡ್ ಕಂಪನಿ ಮಾಡಲು ಹೊರಟಂತಿದೆ. ಇದು ಅತ್ಯಂತ ಅಪಾಯಕಾರಿ ಎಂದರು.
ಗುರುವಾರ ನಡೆದ ಹುಬ್ಬಳ್ಳಿ ಜಗ್ಗಲಗಿ ಹಬ್ಬದಲ್ಲೂ ಅಷ್ಟೇ. ಮೊದಲು ನಾವು ಆರಂಭಿಸಿದ್ದ ಹುಬ್ಬಳ್ಳಿ ಹಲಗಿ ಹಬ್ಬ ಪಕ್ಷಾತೀತವಾಗಿ ನಡೆಯುತ್ತಿತ್ತು. ಈಗ ಟೆಂಗಿನಕಾಯಿ ಅವರು ಎಲ್ಲವನ್ನೂ ತಮ್ಮದೇ ಮಾಡಿಕೊಂಡಿದ್ದಾರೆ. ಬಿಜೆಪಿ ಮಂಡಲ ಅಧ್ಯಕ್ಷರು, ಕಾರ್ಯಕರ್ತರಿಗೆ ಆಹ್ವಾನ ನೀಡಿದ್ದಾರೆ. ಇದಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷರ ಅನುಮತಿ ಪಡೆದಿದ್ದರೆ? ಎಂದು ಪ್ರಶ್ನಿಸಿದ ಅವರು, ಅದರ ಬಗ್ಗೆ ನಮಗೇನೂ ಬೇಜಾರಿಲ್ಲ. ಆದರೆ, ಹಬ್ಬದ ಹೆಸರಲ್ಲಿ ಪಕ್ಷವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ಬಗ್ಗೆ ಆಕ್ಷೇಪ ಅಷ್ಟೇ ಎಂದರು. ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲುವುದಕ್ಕೂ ಇವರೇ ಕಾರಣ. ಅಲ್ಲಿ ಬಿಜೆಪಿಯಲ್ಲೇ ಅಧಿಕೃತ ಅಭ್ಯರ್ಥಿ ವಿರುದ್ಧ 14 ಅಭ್ಯರ್ಥಿಗಳನ್ನು ಸಜ್ಜು ಮಾಡಿ ಪರೋಕ್ಷವಾಗಿ ಕಾಂಗ್ರೆಸ್ಗೆ ನೆರವಾದರು ಎಂದು ದೂರಿದರು. ನಾನು ಜಗದೀಶ ಶೆಟ್ಟರ್, ಪ್ರಲ್ಹಾದ ಜೋಶಿ ಅವರ ಕಟ್ಟಾ ಅಭಿಮಾನಿ ಎಂದ ಮುತ್ತಣ್ಣವರ, ಈ ವಿಚಾರದಲ್ಲಿ ತಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಅಮಿತ್ ಷಾ, ನಳಿನಕುಮಾರ ಕಟೀಲ್ ಸೇರಿ ಪಕ್ಷದ ಗಣ್ಯರಿಗೆ ದೂರು ಸಲ್ಲಿಸಿದ್ದೇನೆ ಎಂದರು.