ಹನೂರಿನಲ್ಲಿ ಬುಧವಾರ ಮಹಿಷಾಸುರ ಮರ್ದಿನಿ (ಮೈಸೂರು ಮಾರಮ್ಮ) ದೇವಿ ಉತ್ಸವಮೂರ್ತಿಯ ಮೆರವಣಿಗೆಯು ಭಕ್ತರ ಸಮ್ಮುಖದಲ್ಲಿ ನಡೆಯಿತು. 
ಜಿಲ್ಲೆ

ಮಹಿಷಾಸುರ ಮರ್ದಿನಿ ವಿಗ್ರಹಮೂರ್ತಿ ಮೆರವಣಿಗೆ

Chamarajanagar

ಹನೂರು: ನವರಾತ್ರಿ ಅಂಗವಾಗಿ ಬುಧವಾರ ಶ್ರೀ ಮಹಿಷಾಸುರ ಮರ್ದಿನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.


ಮಹಾನವಮಿ ಹಾಗೂ ವಿಜಯದಶಮಿ ಹಬ್ಬದ ಅಂಗವಾಗಿ ಮಹಿಷಾಸುರ ಮರ್ದಿನಿ ವಿಗ್ರಹಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಪಟ್ಟಕ್ಕೆ ಕೂರಿಸಲಾಗಿತ್ತು. ನಿತ್ಯ ಪೂಜೆ ಸಲ್ಲಿಸಲಾಗುತ್ತಿತ್ತು. 10ನೇ ದಿನವಾದ ವಿಜಯದಶಮಿಯಂದು ಪಟ್ಟಣದಲ್ಲಿ ದೇವಿಯ ವಿಗ್ರಹಮೂರ್ತಿ ಮೆರವಣಿಗೆ ನಡೆಯಿತು. ಬಳಿಕ ಬಂಡಳ್ಳಿ ರಸ್ತೆಯ ಬದಿಯಲ್ಲಿರುವ ಬನ್ನಿಮಂಟಪ ಬಡಾವಣೆಯ ಬನ್ನಿಮರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.


ದೇಗುಲದಲ್ಲಿ ದೇವಿಗೆ ಹಾಲು, ಮೊಸರು, ಬೆಣ್ಣೆ, ಜೇನುತುಪ್ಪ, ಎಳನೀರು, ಪನ್ನೀರು, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಬಳಿಕ ಧಾರ್ಮಿಕ ವಿಧಿವಿಧಾನಗೊಂದಿಗೆ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ 2.30ರಲ್ಲಿ ಮಹಿಷಾಸುರ ಮರ್ದಿನಿ ವಿಗ್ರಹಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಪೂಜೆ ಸಲ್ಲಿಸಿದ ಬಳಿಕ ಹಳೇ ಎಂಡಿಸಿಸಿ ರಸ್ತೆ, ಬಸ್ ನಿಲ್ದಾಣ, ಬಂಡಳ್ಳಿ ರಸ್ತೆ, ಬೆಟ್ಟಳ್ಳಿ ಮಾರಮ್ಮನ ದೇಗುಲ ಮೂಲಕ ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯಮೇಳದೊಂದಿಗೆ ಬನ್ನಿಮಂಟಪ ಬಡಾವಣೆಯಲ್ಲಿರುವ ಬನ್ನಿಮರಕ್ಕೆ ಮೆರವಣಿಗೆ ಮೂಲಕ ಕರೆತಂದು ಸಂಪ್ರದಾಯದಂತೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರದಿದ್ದರು. ಮೆರವಣಿಗೆಯುದ್ದಕ್ಕೂ ಯುವಕರು ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿದರು. ಬನ್ನಿಮರಕ್ಕೆ ಪೂಜೆ ಸಲ್ಲಿಸಿದ ಬಳಿಕ ಬೆಟ್ಟಳ್ಳಿ ಮಾರಮ್ಮನ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿ ಮಹಿಷಾಸುರ ಮರ್ದಿನಿ ದೇವಾಲಯಕ್ಕೆ ವಿಗ್ರಹಮೂರ್ತಿಯನ್ನು ತಂದು ಪ್ರತಿಷ್ಠಾಪಿಸಲಾಯಿತು. ಈ ವೇಳೆ ಭಕ್ತರಿಗೆ ಮಜ್ಜಿಗೆ, ಪಾನಕವನ್ನು ವಿತರಿಸಲಾಯಿತು.ಫೋಟೋ