ಜಿಲ್ಲೆ

ಮಹಿಷಾ ದಸರಾ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ

ಮೈಸೂರು: ಮಹಿಷ ದಸರಾ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅದನ್ನು ತಡೆದೇ ತಡೆಯುತ್ತೇವೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.


ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಿಷ ದಸರಾ ಆಚರಣೆಗೆ ಅವಕಾಶ ನೀಡುವುದಿಲ್ಲ. ಇದನ್ನು ತಡೆಯಲು ಈಗಾಗಲೇ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದರು.


ದಸರಾ ಸಂದರ್ಭದಲ್ಲಿ ಪೂಜೆ, ಪ್ರಸಾದ ಚಾಮುಂಡಿದೇವಿಗೆ ಮಾತ್ರ ಸಲ್ಲಬೇಕು. ಅದೇಗೆ ಮಹಿಷ ದಸರಾ ಆಚರಣೆ ಮಾಡುತ್ತಾರೋ ನೋಡುತ್ತೇವೆ ಎಂದು ಗುಡುಗಿದರು.


ಈ ಆಚರಣೆ ಮೂಲಕ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಮಾಡಿಕೊಳ್ಳಲಿ, ಅದು ಅವರವರ ಇಷ್ಟ. ಆದರೆ, ಈ ಕೆಟ್ಟ ಆಚರಣೆ ಮೂಲಕ ಬಹುಸಂಖ್ಯಾತರ ಭಾವನೆಗಳ ವಿರುದ್ಧ ನಿಂತಿದ್ದಾರೆ. ಬೇಕೆಂದರೆ ಅವರವರ ಮನೆಯಲ್ಲಿ ಮಹಿಷ ದಸರಾ ಆಚರಿಸಿಕೊಳ್ಳಲಿ.

ಮಹಿಷ ದಸರಾ ಆಚರಣೆಯ ಹಿಂದಿನ ದಿನವೇ ನಾವೆಲ್ಲರೂ ಚಾಮುಂಡಿಬೆಟ್ಟಕ್ಕೆ ತೆರಳಿ ಮಲಗುತ್ತೇವೆ. ಆ ಮೂಲಕ ಮಹಿಷ ದಸರಾ ಆಚರಣೆಗೆ ನಾವು ಬಿಡುವುದಿಲ್ಲ ಎಂದು ಹೇಳಿದರು.