ಜಿಲ್ಲೆ

ಮಹಿಷಾ ದಸರಾ ಆಚರಣೆಗೆ ಸಂವಿಧಾನದಲ್ಲಿಯೇ ಅವಕಾಶವಿದೆ : ಸಂಸದ ಯದುವೀರ್

ಮೈಸೂರು: ಮಹಿಷಾ ದಸರಾ ಆಚರಣೆಗೆ ಸಂವಿಧಾನದಲ್ಲೇ ಅವಕಾಶವಿದ್ದು, ಆಚರಣೆಗೆ ನಮ್ಮ ವಿರೋಧವಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಿಷಾ ದಸರಾ ಆಚರಿಸುವುದು ಅವರ ಹಕ್ಕಾಗಿದ್ದು, ನಾನೊಬ್ಬ ಜನಪ್ರತಿನಿಧಿಯಾಗಿ ಆ ಆಚರಣೆಯನ್ನು ವಿರೋಧ ಮಾಡುವುದಿಲ್ಲ. ಆಚರಣೆಗೆ ಯಾರು ವಿರೋಧ ಮಾಡುತ್ತಾರೋ ಅವರನ್ನೇ ಹೋಗಿ ಕೇಳಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೆಸರು ಹೇಳದೆ ಟಾಂಗ್ ನೀಡಿದರು.

ಮಹಿಷಾ ದಸರಾ ಆಚರಣೆಯನ್ನು ಮನೆಯಲ್ಲಿ ಅಥವಾ ಸಾರ್ವಜನಿಕವಾಗಿ ಆಚರಿಸಬಹುದು. ಚಾಮುಂಡಿಬೆಟ್ಟದಲ್ಲಿ ಆಚರಿಸಬೇಕು ಎಂದು ಸಮಿತಿಯವರು ನಿರ್ಧರಿಸಿದ್ದಾರೆ. ಆ ಸಂದರ್ಭ ದಸರಾ ಉತ್ಸವ ನಡೆಯುವ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಆಚರಣೆ ಬೇಡ ಎಂಬ ಮಾತು ಕೇಳಿ ಬರುತ್ತಿದೆ. ಅಲ್ಲಿಯೇ ಮಾಡುತ್ತೇವೆ ಎಂದು ಸಮಿತಿಯವರು ತೀರ್ಮಾನ ಮಾಡಿದರೆ ಈ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಮಹಿಷಾ ದಸರಾ ಆಚರಿಸುವ ದಿನದಂದು ನಾನು ಊರಿನಲ್ಲಿ ಇರುವುದಿಲ್ಲ, ಹಾಗಾಗಿ ಆ ಆಚರಣೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದರು.