ಮೈಸೂರು: ಮಹಿಷ ಪ್ರಾಧಿಕಾರ ರಚನೆ ಮತ್ತು ಮಹಿಷ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಮಹೇಶ್ ಚಂದ್ರಗುರು ಆಗ್ರಹಿಸಿದರು.
ಕಲಬುರಗಿ, ಮೈಸೂರು, ಬೆಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ಇತರ ವಿವಿಗಳಲ್ಲಿ ಮಹಿಷ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು. ಈ ಎರಡು ಬೇಡಿಕೆ ಕುರಿತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿವಿಧ ಕಾಲಘಟ್ಟದಲ್ಲಿ ಇತಿಹಾಸ ಹಾಗೂ ಪುರಾಣಗಳ ನಡುವೆ ಸಂಘರ್ಷ ನಡೆದಿದ್ದು, ಸದಾ ಇತಿಹಾಸಕ್ಕೆ ಜಯವಾಗಿದೆ. ನಮಗೆ ಮೂಢನಂಬಿಕೆ, ಕಂದಾಚಾರಗಳಲ್ಲಿ ನಂಬಿಕೆ ಇಲ್ಲ. ಮಹಿಷ ಸತ್ಯ, ಆದರೆ ಆತನನ್ನು ಕೊಂದರೆಂಬ ವ್ಯಕ್ತಿಯೇ ಮಿಥ್ಯ. ಹೀಗಾಗಿ, ಇತಿಹಾಸವನ್ನು ಅಲ್ಲಗಳೆಯುವುದು ಮೂರ್ಖತನ ಎಂದರು.
ಮಹಿಷಾಸುರ ಎಂದರೆ ಪ್ರಾಣವನ್ನು ರಕ್ಷಿಸುವವನು ಎಂದರ್ಥ. ಆದರೆ, ಆತನನ್ನು ರಾಕ್ಷಸನೆಂದು ಹೀಗಳೆಯುವ ಅಧಿಕಾರವನ್ನು ನೀಡಿದವರು ಯಾರು ಎಂದು ಪ್ರಶ್ನಿಸಿದರು.
ಮಹಿಷ ಬೌದ್ಧನಾಗಿದ್ದು, ಆದ್ದರಿಂದಲೇ ಮಹಿಷ ಬೌದ್ಧ ದಸರಾವನ್ನು ಆಚರಿಸಲಾಗುವುದು. ವಿರೋಧಿಸುವವರಿಗೆ ತಕ್ಕ ಉತ್ತರ ಕೊಡಲಾಗುವುದು. ಸಂಸದ ಪ್ರತಾಪ್ ಸಿಂಹ ಕಟ್ಟರ್ ಹಿಂದುತ್ವವಾದಿ. ನಾವು ಮಾನವತಾವಾದಿಗಳು. ಮಾನವತಾವಾದಿಗಳಾಗಿರುವ ನಮ್ಮ ಮುಂದೆ ಪ್ರತಾಪ್ ಸಿಂಹ ಆಟ ನಡೆಯಲ್ಲ ಎಂದು ಗುಡುಗಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಮಹಿಷ ದಸರಾ ಆಚರಣೆ ಸಮಿತಿ ವತಿಯಿಂದ ಅಕ್ಟೋಬರ್ 13ರಂದು ನಗರದಲ್ಲಿ ಮಹಿಷ ದಸರಾ ಆಚರಿಸಲಾಗುವುದು. ಇದಕ್ಕೂ ಮೊದಲು ಮಹಿಷನ ಕುರಿತು ತಪ್ಪು ಕಲ್ಪನೆ ಹೋಗಲಾಡಿಸಲು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು. ಸದ್ಯದಲ್ಲೇ ಸ್ಥಳ ಹಾಗೂ ದಿನಾಂಕ ನಿಗದಿಪಡಿಸಲಾಗುವುದು. ದಸರಾ ವಿರುದ್ಧ, ಚಾಮುಂಡಿ ವಿರುದ್ಧ ಮಹಿಷ ದಸರಾ ಆಚರಣೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಮಹಿಷನನ್ನು ವಿರೋಧಿಸುವವರು ಸಹ ಪಾಲ್ಗೊಂಡು ಆತನ ಕುರಿತು ತಮ್ಮಲ್ಲಿರುವ ದಾಖಲೆ ಪ್ರದರ್ಶಿಸಿ ವಾದ ಮಂಡಿಸಲು ಮುಕ್ತ ಅವಕಾಶವಿದೆ. ನಾವು ನೀಡುವ ಮಾಹಿತಿಗಳು ಸುಳ್ಳೆಂದು ಸಾಬೀತಾದರೆ ಇನ್ನು ಮುಂದೆ ಮಹಿಷ ದಸರಾವನ್ನೇ ಆಚರಣೆ ಮಾಡುವುದಿಲ್ಲ ಎಂದು ಹೇಳಿದರು.
ಮಹಿಷ ದಸರಾ ಮುಗಿದ ಅಧ್ಯಾಯವೆಂದು ಸಂಸದ ಪ್ರತಾಪ್‌ಸಿಂಹ ಹೇಳಿರುವುದು ಸರಿಯಲ್ಲ. ಲೋಕಸಭಾ ಚುನಾವಣೆಯಲ್ಲಿ ಅವರ ರಾಜಕೀಯ ಅಧ್ಯಾಯ ಮುಗಿಯಲಿದೆ ಎಂದು ಕಿಡಿಕಾರಿದರು.
ಸಾಹಿತಿ ಪ್ರೊ.ಕೆ.ಎಸ್. ಭಗವಾನ್, ಲೇಖಕ ಸಿದ್ದಸ್ವಾಮಿ ಇನ್ನಿತರರು ಇದ್ದರು.