ಹರಪನಹಳ್ಳಿ: ರಕ್ತದಾನ ಮಾಡಿದರೆ ಹಲವರ ಪ್ರಾಣ ಉಳಿಸಿದಂತಾಗುತ್ತದೆ ಎಂದು ಬಿಎಚ್‌ಇಒ ಭುವನೇಶ್ವರಿ ಹೇಳಿದರು.
ಚಿಗಟೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಯಾವುದೇ ಒಬ್ಬ ವ್ಯಕ್ತಿ ಬೇರೊಬ್ಬರ ಜೀವ ಉಳಿಸಲು ಸ್ವಯಂಪ್ರೇರಿತವಾಗಿ ರಕ್ತ ನೀಡುವುದಕ್ಕೆ ರಕ್ತದಾನ ಎನ್ನುತ್ತಾರೆ ಎಂದರು.
ರಕ್ತಕ್ಕೆ ಪರ್ಯಾಯ ವಸ್ತು ಇನ್ನೊಂದಿಲ್ಲ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಭಾರತದಲ್ಲಿ ವಾರ್ಷಿಕ 14.6 ಮಿಲಿಯನ್ ಯೂನಿಟ್ ರಕ್ತ ಬೇಕಾಗುತ್ತದೆ. ನಿತ್ಯ ಅಪಘಾತಗಳು, ತುರ್ತು ಚಿಕಿತ್ಸೆ, ಕ್ಯಾನ್ಸರ್ ರೋಗಿಗಳು, ಗರ್ಭಿಣಿಯರು, ಬಾಣಂತಿಯರು, ಥ್ಯಾಲಸೀಮಿಯಾ, ಹಿಮೋಫಿಲಿಯಾ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಬಿಸಿದ್ದಾರೆ ಎಂದರು.
ಲಿಂಗಭೇದವಿಲ್ಲದೆ 18ರಿಂದ 60 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿಗಳು ರಕ್ತ ನೀಡಬಹುದಾಗಿದೆ, ಪುರುಷರು ಮೂರು ತಿಂಗಳಿಗೊಮ್ಮೆ ಹಾಗೂ ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬುದು. 45 ಕೆಜಿಗಿಂತ ಹೆಚ್ಚಿನ ತೂಕ ಹೊಂದಿರುವ ಹಾಗೂ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಇರುವವರು ರಕ್ತದಾನ ಮಾಡಬಹುದಾಗಿದೆ. ಸಿಸ್ಟಲಿಕ್ ರಕ್ತದೊತ್ತಡ 100 ರಿಂದ 140 ಹಾಗೂ ಡಯಸ್ಟಾಲಿಕ್ ರಕ್ತದೊತ್ತಡ 70 ರಿಂದ 100 ಇರುವವರು ಕೂಡ ರಕ್ತದಾನ ಮಾಡಬಹುದಾಗಿದೆ ಎಂದು ಭುವನೇಶ್ವರಿ ತಿಳಿಸಿದರು.
ಶುಶ್ರೂಷಣಾಧಿಕಾರಿ ವಿದ್ಯಾ ಮಾತನಾಡಿ. ಮಲೇರಿಯಾ, ಏಡ್ಸ್, ಸಿಫಿಲಿಸ್, ಹೆಪಾಟೈಟಿಸ್ ಬಿ, ಸಿ, ಕಾಮಾಲೆ ಈ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವವರು ರಕ್ತದಾನ ಮಾಡಬಾರದು, ಮದ್ಯ, ಮಾದಕ ದ್ರವ್ಯ ಸೇವನೆ ಮಾಡಿದಾಗ ಮತ್ತು ಮಹಿಳೆಯರು ಮುಟ್ಟಿನ ವೇಳೆ, ಗರ್ಭಾವಸ್ಥೆ ಇದ್ದಾಗ, ಮಕ್ಕಳಿಗೆ ಹಾಲು ನೀಡುವ ದಿನಗಳಲ್ಲಿ ರಕ್ತದಾನ ಮಾಡಬಾರದು ಎಂದು ತಿಳಿಸಿದರು.