ಮಡಿಕೇರಿ: ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಸಾಗಿಸಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಸಾಲ ಸೌಲಭ್ಯ ಒದಗಿಸುತ್ತಿದ್ದು, ಇದನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಂಡು ಪ್ರಗತಿ ಸಾಧಿಸಬೇಕು ಎಂದು ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ಹೇಳಿದರು.
ಮಾಯಮುಡಿಯಲ್ಲಿ ಮಹಿಳೆಯರೇ ತಯಾರಿಸಿದ ವಿವಿಧ ಉತ್ಪನ್ನಗಳ ಮಾರಾಟ ಮೇಳವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು. ಮಹಿಳೆಯರು ಸ್ವಾಲಂಬಿಗಳಾಗಿ ಜೀವನ ಸಾಗಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ತಯಾರಿಸುವ ಉತ್ಪನ್ನಗಳಿಗೆ ಗ್ರಾ.ಪಂ ಮಾರುಕಟ್ಟೆ ಕಲ್ಪಿಸುವ ಪ್ರಯತ್ನ ಮಾಡಲಿದೆ.
ದಿನನಿತ್ಯ ಬೇಡಿಕೆ ಇರುವ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು. ತಾವು ತಯಾರಿಸಿದ ವಸ್ತುಗಳಿಗೆ ಸೂಕ್ತ ಬೆಲೆ ಸಿಗಬೇಕಾದರೆ ಗ್ರಾಮ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲೂ ಮಾರುಕಟ್ಟೆ ವ್ಯವಸ್ಥೆ ಲಭಿಸಬೇಕು. ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಣೆಗೆ ಸ್ವಂತ ಉದ್ದಿಮೆ ಸ್ಥಾಪಿಸಲು ವಿವಿಧ ರೀತಿಯ ಸಹಾಯಧನದ ರೂಪದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಜೇನು, ಹಂದಿ ಸಾಕಣೆ ಮತ್ತು ಹಸುವಿನ ಕೊಟ್ಟಿಗೆ ನಿರ್ಮಾಣ ಮಾಡಲು ಗ್ರಾ.ಪಂ. ಮೂಲಕ ಸಹಾಯಧನ ನೀಡಲಾಗುತ್ತಿದ್ದು, ಮಹಿಳೆಯರು ಇದರ ಲಾಭ ಪಡೆದುಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆಪಟ್ಟೀರ ಎ. ಬೋಪಣ್ಣ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪಿ.ಎ. ಮಲ್ಲಿಗೆ, ಕಾರ್ಯದರ್ಶಿ ಟಿ. ಪಾರ್ವತಿ, ಗ್ರಾ.ಪಂ ಸದಸ್ಯರಾದ ಪೊನ್ನಿಮಾಡ ಸರಸ್ವತಿ, ತಾ.ಪಂ.ಇಒ ಅಪ್ಪಣ್ಣ, ಎನ್‌ಆರ್‌ಎಲ್‌ಎಂ ಜಿಲ್ಲಾ ವ್ಯವಸ್ಥಾಪಕ ಜಗನ್ನಾಥ್, ತಾಲೂಕು ವ್ಯವಸ್ಥಾಪಕ ಮಂಜುನಾಥ್, ಕೃಷಿಯೇತರ ಎನ್‌ಆರ್‌ಎಲ್‌ಎಂ ತಾಲೂಕು ವ್ಯವಸ್ಥಾಪಕ ಧನ್ಯಾ ಸೇರಿದಂತೆ ವಿವಿಧ ಮಹಿಳಾ ಸಂಘಟನೆಯ ಪ್ರಮುಖರು ಹಾಜರಿದ್ದರು.