ಕೊಟ್ಟೂರು: ಮಡಿಲಿಲ್ಲ ಉಡಿ ತುಂಬಿಸಿಕೊಳ್ಳುವುದರಿಂದ ದೀರ್ಘಕಾಲ ಮುತ್ತೈದೆಯಾಗಿ ಜೀವನ ಯಾವ ರೀತಿ ಸಾಗಿಸಬೇಕು ಎಂಬುದರ ಮಾರ್ಗದರ್ಶನ ಮತ್ತು ಜ್ಞಾನ ಪ್ರಾಪ್ತವಾಗಲಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಪಟ್ಟಣದ ಚಾನುಕೋಟಿ ಆಶ್ರಮದಲ್ಲಿ ಚಾನುಕೋಟಿ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳ ಷಷ್ಠಿ ಪೂರ್ಣ ಸಂಭ್ರಮ ಹಾಗೂ ಪಂಚಾಚಾರ್ಯರ ಯುಗಮನೋತ್ಸವ ಕಾರ್ಯಕ್ರಮ ನಿಮಿತ್ತ ಮುತ್ತೈದೆಯರಿಗೆ ಉಡಿ ತುಂಬಿ ಶುಕ್ರವಾರ ಆಶೀರ್ವಚನ ನೀಡಿದರು.
ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳ ಷಷ್ಠಿಪೂರ್ಣ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರಿಗೆ ಉಡಿ ತುಂಬಿ ಮಹಿಳೆಯರ ಬಾಳು ಹಾಗೂ ಸಂಸಾರ ಸುಖವಾಗಿರಲಿ ಎಂದು ಹರಿಸಿದ್ದು ಶ್ಲಾಘನೀಯ ಮತ್ತು ಸ್ತುತ್ಯಾರ್ಹ. ಮಹಿಳೆಯರ ಸ್ಥಾನಮಾನ ಬಹುದೊಡ್ಡದು. ಸಮಾಜದ ಎಲ್ಲ ದೃಷ್ಟಿಕೋನದಿಂದಲೂ ಮಹಿಳೆಯರನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ವೇದಗಳ ಕಾಲದಿಂದಲೂ ಮಹಿಳೆಯರು ಸೂಕ್ತಿಗಳನ್ನು ರಚಿಸಿದ್ದಾರೆ. ಅನೇಕ ಮಹಿಳೆಯರು ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿ ಸಾಕಷ್ಟು ವಿಕಾಸ ಹೊಂದಿದ್ದಾರೆ. ಮಹಿಳೆಯರು ಪುರುಷರಷ್ಟೇ ಸರಿಸಮಾನರು ಎಂಬುದಕ್ಕೆ ರಾಜರ ಕಾಲದಿಂದ ಪ್ರಸ್ತುತ ದಿನಮಾನದ ತನಕ ಅನೇಕ ನಿದರ್ಶನಗಳಿವೆ. ಬಾಹ್ಯಕಾಶಕ್ಕೆ ಹೋಗಿ 9 ತಿಂಗಳು ಆಲ್ಲಿದ್ದು ಮರಳಿ ಬಂದ ಸವಿತಾ ವಿಲಿಯಮ್ಸ್ ಇದಕ್ಕೆ ಜಲ್ವಂತ ಸಾಕ್ಷಿ. ಆದ್ದರಿಂದ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಬೇಕು ಎಂದು ಶ್ರೀಶೈಲ ಜಗದ್ಗುರುಗಳು ಹೇಳಿದರು.
ಚಾನುಕೋಟಿ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಜಯನಗರ ಜಿಲ್ಲಾ ನಿರ್ದೇಶಕ ಸತೀಶ ಶೆಟ್ಟಿ, ಬೆಣ್ಣೆಹಳ್ಳಿಯ ಪಂಚಾಕ್ಷಾರಿ ಶಿವಾಚಾರ್ಯ ಸ್ವಾಮೀಜಿ ಮುಂತಾದವರಿದ್ದರು.