ಜಿಲ್ಲೆ

ಮಹಿಳೆಯರು ಪರಿಶ್ರಮದಿಂದ ಯಶಸ್ಸು ಗಳಿಸಲಿ:  ಚಿಂತಕ ಶಂಕರ ದೇವನೂರು

ಮೈಸೂರು: ಮಹಿಳೆಯರು ಅವಕಾಶಗಳನ್ನು ಕಲ್ಪಿಸಿಕೊಂಡು ಕಠಿಣ ಪರಿಶ್ರಮದೊಂದಿಗೆ ಯಶಸ್ಸುಗಳಿಸಬೇಕು ಎಂದು ಸಂಸ್ಕೃತಿ ಚಿಂತಕ ಶಂಕರ ದೇವನೂರು ಹೇಳಿದರು.

ನಗರದ ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಜೆಎಸ್‌ಎಸ್ ಮಹಿಳಾ ಪಾಲಿಟೆಕ್ನಿಕ್ ಸಂಸ್ಥೆಯ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಧನೆಗೆ ಅತ್ಯಂತ ಅವಶ್ಯವಾದದ್ದು ಛಲ. ಹೆಣ್ಣು ಮಕ್ಕಳು ಓದಿನ ಛಲ ರೂಢಿಸಿಕೊಳ್ಳಬೇಕು. ಪಾಸ್ ಆದರೆ ಕಾಲೇಜು, ಫೇಲ್ ಆದರೆ ಮದುವೆ ಎಂಬ ಮಾತಿದೆ. ಹಾಗೇ ಆಯ್ಕೆ ನಿಮ್ಮ ಕೈಯಲ್ಲಿದೆ ಎಂದರು.

ಸಾಧನೆಯ ಕನಸುಗಳನ್ನು ಕಟ್ಟಿ ನನಸು ಮಾಡಿಕೊಳ್ಳಬೇಕು. ಇದಕ್ಕಾಗಿ ಕಠಿಣ ಪರಿಶ್ರಮ ಹಾಕಬೇಕು. ಚಂದ್ರಯಾನ ಉಡಾವಣೆ ಯಶಸ್ವಿಗೊಳಿಸಿ ಜಗತ್ತನ್ನು ಮೆರುಗೊಳಿಸಿದ ವಿಜ್ಞಾನಿಗಳಲ್ಲಿ ಎಂ.ವಿ.ರೂಪಾ ಒಬ್ಬರು. ಇವರು ಜೆಎಸ್‌ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದವರು. ಸಾಧನೆಗೆ ಮನಸ್ಸಿದ್ದರೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದರು.

ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ಎಚ್.ಬಸವನಗೌಡಪ್ಪ ಮಾತನಾಡಿ, ವಿದ್ಯಾರ್ಥಿಗಳು ಬದ್ಧತೆಯೊಂದಿಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿ ಉತ್ತಮ ಉದ್ಯೋಗಗಿಟ್ಟಿಸಿಕೊಳ್ಳುವ ಗುರಿಯೊಂದಿಗೆ ಮುನ್ನುಗ್ಗಬೇಕು ಎಂದರು.

ಪ್ರತಿಯೊಬ್ಬರಲ್ಲೂ ವಿಶೇಷವಾದ ಪ್ರತಿಭೆ ಅಡಗಿದೆ. ಅದನ್ನು ಬಳಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕಾದರೆ ಪ್ರಮುಖ ಮೂರು ಅಂಶವನ್ನು ಅರಿತುಕೊಳ್ಳಬೇಕು. ಬದ್ಧತೆ, ಶಿಕ್ಷಣ, ಉದ್ಯೋಗ ಈ ಮೂರು ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಬದ್ಧತೆ ಇರಬೇಕು. ಅದರೊಂದಿಗೆ ಉತ್ತಮವಾದ ಸಂವಹನವೂ ಇರಬೇಕು. ಅದು ಸಮರ್ಪಕವಾಗಿಯೂ ಪರಿಣಾಮಕಾರಿಯಾಗಿಯೂ ಇರಬೇಕು.

ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಸವಾಲು ಎದುರಾದರೂ ಧೈರ್ಯದಿಂದ ಎದುರಿಸಬೇಕು. ಏಕೆಂದರೆ ಪ್ರತಿಯೊಂದೂ ಸವಾಲಿಗೂ ಉತ್ತರ ಇರುತ್ತದೆ. ಇದರೊಡನೆ ಶ್ರಮ ಪಡಬೇಕು. ಇದು ಕೇವಲ ವೈದ್ಯಕೀಯ ಕ್ಷೇತ್ರ ಮಾತ್ರವಲ್ಲ, ಎಲ್ಲ ಕ್ಷೇತ್ರಗಳಲ್ಲೂ ಸವಾಲುಗಳು ಎದುರಾಗುತ್ತಲೇ ಇರುತ್ತವೆ ಎಂದು ಅಭಿಪ್ರಾಯಪಟ್ಟರು.

ಪ್ರಾಂಶುಪಾಲ ಎನ್.ಬಿ.ಲೋಕೇಶ್, ವಿದ್ಯಾರ್ಥಿ ಕ್ಷೇಮಾಪಾಲನ ಅಧಿಕಾರಿ ವಿ.ಮೀರಾ, ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷೆ ಸ್ಫೂರ್ತಿ, ಕೆ.ಜೆ.ಮಯೂರಿ ಇದ್ದರು.