ಕೊಳ್ಳೇಗಾಲ: ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಆಕೆಯ ಇಡೀ ಕುಟುಂಬವೇ ಅಭಿವೃದ್ಧಿಯಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ನಂಜಮ್ಮಣಿ ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಮಲೈ ಮಹದೇಶ್ವರ ಮಹಿಳಾ ಕಳಂಜಿಯ ಒಕ್ಕೂಟದ 13ನೇ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದರು.
ನಾನು ಸಮಾಜದ ಅಭಿವೃದ್ಧಿ ಬಗ್ಗೆ ಅಳತೆ ಮಾಡುವುದಾದರೆ ಮೊದಲು ಮಹಿಳೆಯ ಅಭಿವೃದ್ಧಿಯನ್ನೇ ಅಳತೆಗೋಲಾಗಿ ಇಟ್ಟುಕೊಳ್ಳುತ್ತೇನೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಇದರ ಅರ್ಥ, ಮಹಿಳೆ ಅಭಿವೃದ್ಧಿ ಹೊಂದಿದರೆ ಮಾತ್ರ ಇಡೀ ಸಮಾಜದ ಅಭಿವೃದ್ಧಿ ಆಗಿದೆ ಎನ್ನುವುದಾಗಿದೆ ಎಂದರು.
ಸರ್ಕಾರಗಳು ಸಹ ಮಹಿಳೆಯನ್ನು ಆರ್ಥಿಕವಾಗಿ ಸಬಲೀಕರಣ ಮಾಡಲು ಶ್ರಮಿಸುತ್ತಿದೆ. ಅದಕ್ಕೆ ಉದಾಹರಣೆ ಗೃಹಲಕ್ಷ್ಮೀ ಯೋಜನೆಯಾಗಿದೆ. ಶ್ರೀ ಮಲೈ ಮಹದೇಶ್ವರ ಮಹಿಳಾ ಕಳಂಜಿಯ ಒಕ್ಕೂಟದಂತಹ ಸಂಘ-ಸಂಸ್ಥೆಗಳು ಸಹ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಶ್ರಮಿಸುತ್ತಿದೆ ಎಂದರು.
ಮಹಿಳೆಯರು ಯಾವುದೇ ಸಂಸ್ಥೆಗಳಲ್ಲಿ ಪಡೆದ ಸಾಲವನ್ನು ವ್ಯರ್ಥವಾಗಿ ವ್ಯಯಿಸದೆ, ಸ್ವಯಂ ಉದ್ಯೋಗ ಹಾಗೂ ಇನ್ನಿತರ ಸಣ್ಣ ವ್ಯಾಪಾರ-ವಹಿವಾಟು ಮಾಡುವುದಕ್ಕೆ ಬಳಸಿಕೊಳ್ಳಬೇಕು. ಇದರಿಂದ ಬಂದ ಲಾಭದಲ್ಲಿ ಸಾಲವನ್ನು ಸಕಾಲಕ್ಕೆ ತೀರಿಸಬಹುದು ಎಂದು ಸಲಹೆ ನೀಡಿದರು.
ಕೆನರಾ ಬ್ಯಾಂಕ್ ಕೃಷಿ ಅಧಿಕಾರಿ ವೀರಭದ್ರ ಮಾತನಾಡಿ, ಸಾಲ ಮಾಡಿ ಸಾಲವನ್ನು ತೀರಿಸಬಾರದು. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಸಂಘ-ಸಂಸ್ಥೆಗಳು ಹಾಗೂ ಬ್ಯಾಂಕ್‌ಗಳಿಂದ ಸಾಲ ಪಡೆದರೆ ಅದನ್ನು ವ್ಯಾಪಾರ-ವಹಿವಾಟು ಮಾಡುವುದಕ್ಕೆ ಬಳಸಬೇಕು. ಬಂದ ಲಾಭದಲ್ಲಿ ಸಾಲ ತೀರಿಸಬೇಕು ಎಂದು ಹೇಳಿದರು.
ಸಂಘದ ಪ್ರಾದೇಶಿಕ ಸಂಯೋಜಕ ಶಂಕರ್ ಪ್ರಸಾದ್ ಅವರು ಒಕ್ಕೂಟದಲ್ಲಿ ಇಲ್ಲಿವರೆಗೂ ಕೈಗೊಂಡಿರುವ ಕಾರ್ಯಕ್ರಮದ ಪ್ರಗತಿಯ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು.ಒಕ್ಕೂಟದ ಸಂಯೋಜಕ ಹುಸೇನ್, ಕೆಎಂಎಂ ಕೇಂದ್ರ ನಾಯಕಿ ಪ್ರಮೀಳಾ, ಅಧ್ಯಕ್ಷೆ ಸಮೀಮಾ, ಖಜಾಂಚಿ ಕೆಂಪಮ್ಮ, ಕಾರ್ಯದರ್ಶಿ ನಂಜಮಣ್ಣಿ, ಆರ್ಥಿಕ ಸಾಕ್ಷರತಾ ಕೇಂದ್ರದ ಸುಮನ್, ಸಂದೇಶ್ , ಒಕ್ಕೂಟದ ಸದಸ್ಯರು ಹಾಜರಿದ್ದರು.
8ಕೆಜಿಎಲ್-3
ಕೊಳ್ಳೇಗಾಲದ ಗುರುಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀಮಲೈ ಮಹದೇಶ್ವರ ಮಹಿಳಾ ಕಳಂಜಿಯ ಒಕ್ಕೂಟದ 13ನೇ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ನಂಜಮ್ಮಣಿ ಮಾತನಾಡಿದರು. ವೀರಭದ್ರ, ಶಂಕರ್ ಪ್ರಸಾದ್, ಪ್ರಮೀಳಾ ಇತರರು ಇದ್ದರು.
=-=-=-=-=-=-=-=-=-=-=-=-=-=-=-=