ಜಿಲ್ಲೆ

ಮಹಿಳೆಯರಿಗೆ ಹಕ್ಕು ಅಧಿಕಾರ ನೀಡಿದ ಅಂಬೇಡ್ಕರ್

ಚಾಮರಾಜನಗರ: ಶತಶತಮಾನಗಳಿಂದ ಸಮಾಜದಲ್ಲಿ ಹಕ್ಕು-ಅಧಿಕಾರಗಳಿಂದ ವಂಚಿತರಾಗಿದ್ದ ಮಹಿಳೆಯರಿಗೆ ಸಂವಿಧಾನದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರು ಅವಕಾಶ ಕಲ್ಪಿಸಿಕೊಟ್ಟರು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ರೇಣುಕಾದೇವಿ ಹೇಳಿದರು.

ನಗರದ ರೋಟರಿ ಭವನದಲ್ಲಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಮಹಿಳಾ ಘಟಕ, ರೋಟರಿ ಸಂಸ್ಥೆ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಹಾಗೂ ಜಿಲ್ಲಾ ಮಹಿಳಾ ಘಟಕ ಉದ್ಘಾಟನೆ, ಪದಗ್ರಹಣ ಮತ್ತು ಡಾ.ಪಿ.ಪ್ರೇಮ ಅವರ ರಚನೆಯ ನನಗನಿಸಿದ್ದು ಕೃತಿ ಬಿಡುಗಡೆ ಸಮಾರಂಭವನ್ನ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿರುವ ಮಹಿಳೆಯರು ಸಂವಿಧಾನ ಬಂದ ನಂತರ ಹಲವಾರು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಮಹಿಳೆಯರು ಪುರಷರಂತೆ ಬದುಕಲು ಅವಕಾಶ ಮಾಡಿಕೊಟ್ಟಂತಹ ವ್ಯಕ್ತಿಗಳನ್ನು ಒಂದು ವರ್ಗ, ಜಾತಿಗೆ ಸೀಮಿತ ಮಾಡದೆ ಅವರನ್ನು ರಾಷ್ಟ್ರ ನಾಯಕರಾಗಿ ಪ್ರತಿಯೊಬ್ಬರು ಸ್ವೀಕರಿಸಬೇಕಿದೆ ಎಂದರು.

ಮೈಸೂರಿನ ಮಹಿಳಾ ಚಿಂತಕಿ ಡಾ.ಪದ್ಮಶ್ರೀ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಮಹಿಳೆಯರ ಹಕ್ಕುಗಳಿಗಾಗಿ ತಮ್ಮ ಕಾನೂನು ಮಂತ್ರಿಯ ಪದವಿಗೆ ರಾಜೀನಾಮೆಯನ್ನು ನೀಡಿದ್ದರು. ದೇಶದ ಎಲ್ಲ ಧರ್ಮ, ಜಾತಿಯ ಮಹಿಳೆಯರ ಸರ್ವಾಂಗೀಣ ಏಳಿಗೆಗಾಗಿ ಹೋರಾಟ ಮಾಡಿದ್ದಾರೆ. ಆಗಾಗಿ ಅವರನ್ನು ದೇಶದ ಸರ್ವ ಮಹಿಳೆಯರು ಅವರಿಗೆ ಋಣಿಯಾಗಿರಬೇಕು ಎಂದರು. ಇದೇ ವೇಳೆ ರೋಟರಿ ಅಧ್ಯಕ್ಷ ನಾಗರಾಜು, ನೌಕರರ ಸಂಘದ ಜಿಲ್ಲಾಧ್ಯಕ್ಷೆ ರೇಣುಕಾದೇವಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಕವಯಿತ್ರಿ ಡಾ.ಲಕ್ಷ್ಮೀಪ್ರೇಮ ಕುಮಾರ್, ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಜಿಲ್ಲಾಧ್ಯಕ್ಷೆ ಡಾ.ಪಿ.ಪ್ರೇಮ, ಕಾರ್ಯದರ್ಶಿ ಅಶ್ವಿನಿ ಕಶ್ಯಪ, ಎಸ್.ಪಿ.ಕೋಮಲ, ಸುಮಾ ಸಂತೋಷ್, ಕಾತ್ಯಾಯಿನಿ, ರಮ್ಯ, ಲೀಲಾವತಿ, ಪದ್ಮಾಕ್ಷಿ, ಗುರುಲಿಂಗಮ್ಮ, ಸಿ.ಎಸ್.ಮಂಜುಳಾ , ಮಂಗಳ ವೇಣುಗೋಪಾಲ್, ಪುಷ್ಷ ಇತರರು ಹಾಜರಿದ್ದರು.