ಜಿಲ್ಲೆ

ಮಹಿಳೆಯರಿಗೆ ಸಂಕುಚಿತ ಮನೋಭಾವ ಸಲ್ಲದು

ನಾಗಮಂಗಲ: ಮಹಿಳೆಯರು ಸಂಕುಚಿತ ಮನೋಭಾವಗಳಿಗೆ ಒಳಗಾಗಿ ತಮ್ಮ ಜೀವನಕ್ಕೆ ಪರಿಮಿತಿಯನ್ನು ಹಾಕಿಕೊಳ್ಳದೆ, ಮಹಿಳಾ ಸಾಧಕಿಯರ ಜೀವನಗಾಥೆಯನ್ನು ಸ್ಪೂರ್ತಿಯಾಗಿಟ್ಟುಕೊಂಡರೆ ಸಾಧನೆ ಹಾದಿಯಲ್ಲಿ ಸಾಗಬಹುದು ಎಂದು ಪಟ್ಟಣದ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಬಿ.ಎಸ್.ಶಶಿಕಲಾ ಹೇಳಿದರು.


ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಿಗಿರುವ ಸೌಲಭ್ಯಗಳನ್ನು ತಿಳಿಸುವುದು ಹಾಗೂ ಮಹಿಳೆಯರ ಸಬಲೀಕರಣವೇ ವಿಶ್ವ ಮಹಿಳಾ ದಿನಾಚರಣೆಯ ಉದ್ದೇಶ. ಮಹಿಳಾ ಸಾಧಕಿಯರಾದ ಕಲ್ಪನಾ ಚಾವ್ಲಾ, ಇಂದಿರಾಗಾಂಧಿ, ಸಾಲುಮರದ ತಿಮ್ಮಕ್ಕ, ಮದರ್ ಥೆರೆಸಾ, ಸುಧಾಮೂರ್ತಿ ಹಾಗೂ ಮಾಲಿತಿ ಹೊಳ್ಳರ ಜೀವನಗಾಥೆ ನಮ್ಮೆಲ್ಲರಿಗೂ ಸ್ಪೂರ್ತಿಯಾಗಬೇಕು. ಇವರ ಆದರ್ಶಗಳನ್ನು ವು ಮೈಗೂಡಿಸಿಕೊಂಡರೆ ಪ್ರತಿ ಮಹಿಳೆಯೂ ಏನಾದರೂ ಸಾಧನೆ ಮಾಡಬಹುದಾಗಿದೆ ಎಂದರು.


ಕಿರಿಯ ಸಿವಿಲ್ ನ್ಯಾಯಾಧೀಶ ಗಿರೀಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಘನತೆ ಹೆಚ್ಚಿಸಲು ಸರ್ವೋಚ್ಛ ನ್ಯಾಯಾಲಯ ಹಾಗೂ ಪಾರ್ಲಿಮೆಂಟ್‌ನಲ್ಲಿ ಕೆಲವು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನಿಷೇಧವೇರಿದ್ದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮಹಿಳೆಯರಿಗೂ ಸಮಾನವಾಗಿ ದೇವಾಲಯದ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ. ಕೌಟುಂಬಿಕ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹಿಳೆಯರಿಗೆ ಹಲವಾರು ರಕ್ಷಣಾತ್ಮಕವಾದ ಕಾನೂನುಗಳಿವೆ. ನಮ್ಮ ದೇಶದ ರಾಷ್ಟ್ರಪತಿಯಂತಹ ದೊಡ್ಡ ಸ್ಥಾನದಲ್ಲಿ ಮಹಿಳೆಯರಿದ್ದಾರೆ. ಆದ್ದರಿಂದ ಮಹಿಳೆಯರು ಹಿಂಜರಿಕೆ ಮನೋಭಾವ ತೊರೆದರೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಸುಲಭ ಎಂದರು.

ವಕೀಲರ ಸಂಘದ ಅಧ್ಯಕ್ಷ ಟಿ.ಕೆ.ರಾಮೇಗೌಡ, ಸಹಾಯಕ ಸರ್ಕಾರಿ ಅಭಿಯೋಜಕಿ ಅರುಣಾಬಾಯಿ ಮಹಿಳಾ ದಿನಾಚರಣೆ ಹಾಗೂ ಮಹಿಳೆಯರಿಗಿರುವ ಕಾನೂನುಗಳ ಕುರಿತಾಗಿ ಮಾತನಾಡಿದರು.

ಪಟ್ಟಣ ಠಾಣೆ ಪಿಎಸ್‌ಐ ರವಿಕುಮಾರ್, ವಕೀಲರ ಸಂಘದ ಕಾರ್ಯದರ್ಶಿ ಚಿಕ್ಕಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ರೂಪಾ, ವಕೀಲರಾದ ಪುರುಷೋತ್ತಮ್, ರಮೇಶ್ ಇದ್ದರು.