ಜಯಪುರ: ಅಂಬೇಡ್ಕರ್ ಸಂವಿಧಾನ ನೀಡದಿದ್ದಿದ್ದರೆ ದಲಿತ, ಹಿಂದುಳಿದವರ ಸ್ಥಿತಿ ಊಹಿಸಲೂ ಆಗುತ್ತಿರಲಿಲ್ಲ. ಅಂಬೇಡ್ಕರ್ ಅವರನ್ನು ಕೇವಲ ದಲಿತರ ಉದ್ಧಾರಕ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಪರಿಸರ ವಾದಿ ಕಲ್ಕುಳಿ ವಿಠ್ಠಲ್ ಹೆಗ್ಗಡೆ ಹೇಳಿದರು.
ಕರ್ನಾಟಕ ವಿದ್ಯಾರ್ಥಿ ಸಂಘಟನೆಯಿಂದ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರಿಗೆ ಹಾಗೂ ಕಾರ್ಮಿಕರಿಗೆ ಗೌರವಯುತ ಜೀವನ ನಡೆಸಲು ಬೇಕಾದ ಕಾನೂನು ರೂಪಿಸಿದವರು ಅಂಬೇಡ್ಕರ್. ಆದರೆ ಅಂಥ ಸಂವಿಧಾನವನ್ನೇ ಬದಲಾಯಿಸಲು ಕುತಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
ಮಲೆನಾಡು ರೈತ ಮತ್ತು ಕಾರ್ಮಿತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಿಬ್ಳಿ ಪ್ರಸನ್ನಕುಮಾರ್ ಮಾತನಾಡಿ, ದೇಶಕ್ಕಾಗಿ ಹೋರಾಡಿದ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಅವರನ್ನು ಕೆಲವರು ಕೇವಲವಾಗಿ ಮಾತನಾಡಿ, ಜನರನ್ನು ಎತ್ತಿಕಟ್ಟುತ್ತಿದ್ದಾರೆ. ಮೀಸಲಾತಿ ಹೆಸರಿನಲ್ಲಿ ಸುಳ್ಳು ಹೇಳುವ ಮೂಲಕ ಇಬ್ಬರೂ ಮಹಾನ್ ನಾಯಕರನ್ನು ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನ ಮಾಡಿ ಯುವ ಜನತೆಯ ದಾರಿ ತಪ್ಪಿಸಲಾಗುತ್ತಿದೆ. ಅಂಬೇಡ್ಕರ್ ಹಾಗೂ ಗಾಂಧೀಜಿ ಅವರ ಚಿಂತನೆಗಳನ್ನು ಯುವಜನತೆ ತಿಳಿದು ದೇಶ ಕಟ್ಟುವ ಕೆಲಸ ಮಾಡಬೇಕು ಎಂದರು.
ಹರೀಶ್ ಚೌಡಿಕಟ್ಟೆ ಮಾತನಾಡಿ, ಯುವಜನರು ಹಾಗೂ ವಿದ್ಯಾರ್ಥಿಗಳು ಹೋರಾಟ ಮಾಡಿದರೆ ಸಾಲದು, ಅಂಬೇಡ್ಕರ್ ಹೇಳಿದಂತೆ ವಿದ್ಯಾವಂತರಾಗಿ, ಸ್ವಾಭಿಮಾನಿಗಳಾಗಿ ಬದುಕ ಬೇಕಿದೆ ಎಂದರು.
ಜಯಪುರದ ಶೃಂಗೇರಿ ಸರ್ಕಲ್‌ನಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಜಿಪಂ ಮಾಜಿ ಸದಸ್ಯ ಎಚ್.ಎಂ.ಸತೀಶ್, ಕರ್ನಾಟಕ ಜನಶಕ್ತಿ ಜಿಲ್ಲಾ ಸಮಿತಿ ಸದಸ್ಯೆ ಗೌರಿ ಬಾಳೆಹೊನ್ನೂರು, ಸಾಮಾಜಿಕ ಹೋರಾಟಗಾರ ಇಸ್ಮಾಯಿಲ್ ಮಕ್ಕಿಕೊಪ್ಪ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ವಿಜೇಂದ್ರ ಉತ್ತಮೇಶ್ವರ, ಕೌಳಿ ರಾಮು, ವೆಂಕಟೇಶ ಹಾಗಲಗಂಚಿ, ರಾಧಾ ಹಾಗಲಗಂಚಿ ಇತರರಿದ್ದರು.