ಅರಕಲಗೂಡು: ಮಹಿಳೆಯರ ಬದುಕಿನಲ್ಲಿ ಗರ್ಭಾವಸ್ಥೆ ಪ್ರಮುಖ ಘಟ್ಟವಾಗಿದ್ದು, ಈ ಸಮಯದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ಕುರಿತು ಹೆಚ್ಚಿನ ಕಾಳಜಿ ಅಗತ್ಯ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಪುಷ್ಪಲತಾ ತಿಳಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿಗದಿತ ಸಮಯಕ್ಕೆ ಸರಿಯಾಗಿ ವಿವಿಧ ಪರೀಕ್ಷೆ ಹಾಗೂ ಚುಚ್ಚುಮದ್ದುಗಳನ್ನು ಪಡೆಯುವ ಜತೆಗೆ ಪೌಷ್ಟಿಕ ಆಹಾರ ಸೇವಿಸುವುದರಿಂದ ಹೆರಿಗೆ ಕಾರ್ಯ ಸುಲಭವಾಗುವುದಲ್ಲದೆ, ತಾಯಿ ಮತ್ತು ಹುಟ್ಟಲಿರುವ ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸ್ವಾಮಿಗೌಡ ಮಾತನಾಡಿ, ಮದುವೆಯಾದ ಬಳಿಕ ಮಗು ಪಡೆಯುವ ಮುನ್ನ ಮಹಿಳೆ ತಾನು ಗರ್ಭ ಧರಿಸಲು ಸೂಕ್ತವಾಗಿದ್ದೇನೆಯೇ ಎಂಬ ಕುರಿತು ವೈದ್ಯರ ಸಲಹೆ ಪಡೆಯುವುದು ಅಗತ್ಯ ಎಂದು ತಿಳಿಸಿದರು.
ಡಾ ರಮೀಜ್, ಡಾ. ಪೂರ್ಣಿಮಾ ಮಾತನಾಡಿದರು. ಡಾ. ವಾಸ್ತವಿ, ಲೀಲಾವತಿ, ಪರಶುರಾಮ್, ಪರಮೇಶ್, ಗೌರಮ್ಮ, ಪ್ರಕಾಶ್ ಉಪಸ್ಥಿತರಿದ್ದರು. 41 ಮಂದಿ ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆಸಿ ಆರೋಗ್ಯ ಸಲಹೆ ನೀಡಲಾಯಿತು.